ಮುಂಬೈ: ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಾರಣವಾದ ಶೈಕ್ಷಣಿಕ ಮತ್ತು ಜಾತಿ ಪ್ರಮಾಣ ಪತ್ರವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದ ಎನ್ ಸಿಪಿ ಎಂಎಲ್ ಸಿ ಅಮೋಲ್ ಮಿಟ್ಕರಿ ಇದೀಗ ಆ ಟ್ವೀಟ್ ನ್ನು ಅಳಿಸಿ ಹಾಕಿ ಕ್ಷಮೆಯಾಚಿಸಿದ್ದಾರೆ.
ಕರ್ಮಾಲಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಂಜನಾ ಕೃಷ್ಣ ಅವರಿಗೆ ಫೋನ್ ಕಾಲ್ ನಲ್ಲಿ ಡಿಸಿಎಂ ಅಜಿತ್ ಪವಾರ್ ಧಮಕಿ ಹಾಕಿದ್ದು, ಅಕ್ರಮವಾಗಿ ಮಣ್ಣು ತೆಗೆಯುವುದರ ವಿರುದ್ಧದ ಕ್ರಮವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತ ವಿಡಿಯೋ ವೈರಲ್ ಆದ ಬಳಿಕ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಅಜಿತ್ ಪವಾರ್, ನಾನು ಇದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಆದರೆ ಪರಿಸ್ಥಿತಿಯನ್ನು ತಣ್ಣಗಾಗಿಸಲು ಪ್ರಯತ್ನಿಸುತ್ತೇನೆ ಎಂದು ಶುಕ್ರವಾರ ಹೇಳಿದ್ದರು.
ಅಂಜನಾ ಕೃಷ್ಣ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಾರಣವಾದ ಶೈಕ್ಷಣಿಕ ಮತ್ತು ಜಾತಿ ಪ್ರಮಾಣ ಪತ್ರವನ್ನು ಯುಪಿಎಸ್ ಸಿಯಿಂದ ಮಾಹಿತಿ ಬಯಸಿ ಮಿಟ್ಕರಿ ಟ್ವೀಟ್ ಮಾಡಿದ್ದರು. ಮಹಿಳಾ ಪೊಲೀಸ್ ಅಧಿಕಾರಿ ಟಾರ್ಗೆಟ್ ಮಾಡಿದ್ದಕ್ಕಾಗಿ ಮಿಟ್ಕರಿ ವಿರುದ್ಧ ಎನ್ ಸಿಪಿ ಶರದ್ಚಂದ್ರ ಪವಾರ್ ಬಣದ ಸಂಸದೆ ಸುಪ್ರಿಯಾ ಸುಳೆ ಮತ್ತು ಕಾಂಗ್ರೆಸ್ ನಾಯಕರಾದ ಯಶೋಮತಿ ಠಾಕೂರ್ ತೀವ್ರ ವಾಗ್ದಾಳಿ ನಡೆಸಿದ್ದರು.
ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಿಟ್ಕರಿ, ಇದು ನನ್ನ ಪಕ್ಷದ ನಿಲುವಲ್ಲ. ಇದು ನನ್ನ ವೈಯಕ್ತಿಕ ಹೇಳಿಕೆ. ಪೊಲೀಸ್ ಪಡೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅಧಿಕಾರಿಗಳ ಬಗ್ಗೆ ನನಗೆ ಅತ್ಯುನ್ನತ ಗೌರವವಿದೆ. ಪಕ್ಷದ ಹಿರಿಯರ ನಾಯಕತ್ವದ ನಿಲುವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ಹೇಳಿದರು.