ಆಂಧ್ರ ಪ್ರದೇಶ: ಹೆಡ್ ವಾರ್ಡನ್ ಮೇಲೆ ಹಲ್ಲೆ ಮಾಡಿ ಜೈಲಿನಿಂದ ಇಬ್ಬರು ವಿಚಾರಣಾಧೀನ ಕೈದಿಗಳು ಎಸ್ಕೇಪ್ ಆಗಿರುವ ಘಟನೆ ಆಂಧ್ರಪ್ರದೇಶದ ಚೋಡವರಂ ಉಪ ಕಾರಾಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಪಿಂಚಣಿ ಹಣ ದುರುಪಯೋಗಪಡಿಸಿಕೊಂಡು ಜೈಲು ಸೇರಿದ್ದ ಮಾಜಿ ಪಂಚಾಯತ್ ಕಾರ್ಯದರ್ಶಿ ನಕ್ಕಾ ರವಿಕುಮಾರ್ ಜೈಲಿನ ಅಡುಗೆ ಕೋಣೆಯಲ್ಲಿ ಹೆಡ್ ವಾರ್ಡನ್ ವಾಸಾ ವೀರರಾಜು ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ.
ಸುತ್ತಿಗೆಯಿಂದ ವೀರರಾಜು ಅವರ ತಲೆಗೆ ಹೊಡೆದಿದ್ದಾನೆ. ಬಳಿಕ ಅವರಿಂದ ಕೀ ಕಸಿದುಕೊಂಡು ಜೈಲು ಆವರಣದಿಂದ ಪರಾರಿಯಾಗಿದ್ದಾನೆ.
ಈ ಅವ್ಯವಸ್ಥೆಯ ಲಾಭ ಪಡೆದುಕೊಂಡ ಮತ್ತೋರ್ವ ಕೈದಿ ಬೇಜವಾಡ ರಾಮು ಕೂಡಾ ರವಿಕುಮಾರ್ ಜೊತೆಗೆ ಪರಾರಿಯಾಗಿದ್ದಾನೆ. ಜೈಲಿನ ಅಧಿಕಾರಿಗಳು ಕೂಡಲೇ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ನೆರೆಹೊರೆಯ ಪೊಲೀಸ್ ಠಾಣೆಗಳಿಗೆ ಮಾಹಿತಿ ತಿಳಿಸಿದ್ದು, ಅವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ರವಿಕುಮಾರ್, ಪಂಚಾಯಿತಿಯೊಂದರ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಪಿಂಚಣಿ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಉಪ ಕಾರಾಗೃಹದಲ್ಲಿದ್ದರು. ರಾಮು ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದರು. ಆದಷ್ಟು ಬೇಗ ಇಬ್ಬರನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.