ನವದೆಹಲಿ: ನೇಪಾಳದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆಯಲ್ಲಿ ಸಂಭವಿಸಿದ ಪ್ರಾಣ ಹಾನಿಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
ನೇಪಾಳದಲ್ಲಿ ನಡೆದ ಹಿಂಸಾಚಾರ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, ನೇಪಾಳದಲ್ಲಿನ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಹಿಂಸಾಚಾರದಲ್ಲಿ ಯುವಕರು ಮೃತಪಟ್ಟಿರುವುದಕ್ಕೆ ತೀವ್ರ ದುಃಖಿತರಾಗಿದ್ದೇವೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇವೆಂದು ಹೇಳಿದೆ.
ಕಠ್ಮಂಡು ಸೇರಿದಂತೆ ನೇಪಾಳದ ಹಲವು ನಗರಗಳಲ್ಲಿ ಕರ್ಫ್ಯೂ ವಿಧಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ನೇಪಾಳದಲ್ಲಿರುವ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದ ಇರುವಂತೆ ಮತ್ತು ನೇಪಾಳದ ಅಧಿಕಾರಿಗಳು ಹೊರಡಿಸಿದ ಕ್ರಮಗಳು ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ನೇಪಾಳದ ಕೆಪಿ ಓಲಿ ಸರ್ಕಾರವು ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಂತಹ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಸರ್ಕಾರದಲ್ಲಿ ನೋಂದಾಯಿಸಲು ವಿಫಲವಾದ ಕಾರಣ ನೇಪಾಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿತ್ತು. ಈ ಆದೇಶದ ಬೆನ್ನಲ್ಲೇ ಸರ್ಕಾರದ ವಿರುದ್ಧ ಝೆನ್ ಜಿ ತಿರುಗಿ ಬಿದ್ದಿತ್ತು.
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬ್ಯಾನ್ ಮಾಡಿದ್ದಕ್ಕೆ ಯುವ ಜನತೆ ಪ್ರತಿಭಟನೆಗೆ ಮುಂದಾದರು.
ಪೊಲೀಸ್, ಸೇನೆ ಯಾವುದಕ್ಕೂ ಹೆದರದೇ ಬೀದಿಗಿಳಿದು ಯುವ ಜನತೆ ಪ್ರತಿಭಟಿಸಿದರು. ಯುವಕರ ಹಿಂಸಾತ್ಮಕ ಪ್ರತಿಭಟನೆಗಳು ಕನಿಷ್ಠ 19 ಜನರ ಸಾವಿಗೆ ಕಾರಣವಾಯಿತು. ಜೊತೆಗೆ 300ಕ್ಕೂ ಹೆಚ್ಚು ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಪರಿಸ್ಥಿತಿ ಕೈಮೀರಿ ಹೋಗಬಹುದು ಎಂದು ತಿಳಿದು ಸರ್ಕಾರ, ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸುವ ತನ್ನ ಹಿಂದಿನ ನಿರ್ಧಾರವನ್ನು ಪ್ರಸ್ತುತ ಹಿಂತೆಗೆದುಕೊಂಡಿದೆ.
ನೇಪಾಳ ಸಂವಹನ, ಮಾಹಿತಿ ಮತ್ತು ಪ್ರಸಾರ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ರಾತ್ರಿ ಕ್ಯಾಬಿನೆಟ್‌ನ ತುರ್ತು ಸಭೆಯ ನಂತರ ಸರ್ಕಾರ ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸುವ ತನ್ನ ಹಿಂದಿನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ ಎಂದು ಘೋಷಿಸಿದರು.