ನವದೆಹಲಿ: ಭಾರತ-ಅಮೇರಿಕಾ ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಿಮ್ಮೊಂದಿಗೆ ಮಾತನಾಡಲು ನಾನೂ ಉತ್ಸುಕನಾಗಿದ್ದೇನೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ.
ಆತ್ಮೀಯ ಸ್ನೇಹಿತನೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆಂಬ ಟ್ರಂಪ್ ಅವರ ಹೇಳಿಕೆ ಕುರಿತು ಪ್ರಧಾನಿ ಮೋದಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಭಾರತ-ಅಮೇರಿಕಾ ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಮ್ಮ ವ್ಯಾಪಾರ ಮಾತುಕತೆಗಳು ಭಾರತ-ಅಮೆರಿಕ ಪಾಲುದಾರಿಕೆಯ ಅಪರಿಮಿತ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚು ಮಾಡಲು ದಾರಿ ಮಾಡಿಕೊಡುತ್ತವೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಈ ಚರ್ಚೆಗಳನ್ನು ಆದಷ್ಟು ಬೇಗ ಮುಗಿಸಲು ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನೂ ಉತ್ಸುಕನಾಗಿದ್ದೇನೆ. ಉಭಯ ರಾಷ್ಟ್ರಗಳ ಜನರಿಗೆ ಉಜ್ವಲ, ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆಂದು ತಿಳಿಸಿದ್ದಾರೆ.
ಈ ಪೋಸ್ಟ್'ನ್ನು ಧಾನಿ ಮೋದಿ ಅವರು ಡೊನಾಲ್ಡ್ ಟ್ರಂಪ್ ಮತ್ತು POTUS (ಯುಎಸ್ ಅಧ್ಯಕ್ಷ)ಗೆ ಟ್ಯಾಗ್ ಮಾಡಿದ್ದಾರೆ.
ರಷ್ಯಾದಿಂದ ತೈಲ ಖರೀದಿ ಮತ್ತು ಶೇ.50ರಷ್ಟು ತೆರಿಗೆ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತದ ನಡುವಿನ 20 ವರ್ಷಗಳ ಆತ್ಮೀಯ ಸಂಬಂಧ ಬಹುತೇಕ ಹದಗೆಟ್ಟಿದೆ.
ಆ ಬಳಿಕ ಭಾರತವು ಚೀನಾ ಜತೆಗಿನ ವಿವಾದ ಪರಿಹಾರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಅಲ್ಲದೆ, ಅಮೆರಿಕ ಬೆದರಿಕೆ ಹೊರತಾಗಿಯೂ ರಷ್ಯಾ ಜತೆಗಿನ ಸಂಬಂಧ ಕಡಿದುಕೊಳ್ಳದೇ ಇರಲು ನಿರ್ಧರಿಸಿದೆ.
ಇದರ ಬೆನ್ನಲ್ಲೇ ಎಸ್‌ಒ ಶೃಂಗದಲ್ಲಿ ಪುಟಿನ್ ಕ್ಸಿಮತ್ತು ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಶಕ್ತಿ ಪ್ರದರ್ಶನ ಮಾಡಿದ್ದರು. ವಿರೋಧಿಗಳ ಒಗ್ಗಟ್ಟು ಟ್ರಂಪ್ ಅವರನ್ನು ವಿಚಲಿತ ಮಾಡಿದ್ದು, ಇದೀಗ ಟ್ರಂಪ್ ಅವರು ಮೋದಿಯವರ ಕುರಿತು ಮೃದುಧೋರಣೆ ತೋರುತ್ತಿದ್ದಾರೆ.
ಈ ಹಿಂದೆ ಮೋದಿ ಅದ್ಭುತ ಪ್ರಧಾನಿ, ಅವರೊಂದಿಗೆ ಎಂದಿಗೂ ಸ್ನೇಹಿತರಾಗಿರುತ್ತೇನೆಂದು ಹೇಳಿದ್ದ ಟ್ರಂಪ್ ಅವರು, ಇದೀಗ ಆತ್ಮೀಯ ಸ್ನೇಹಿತನೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಟ್ರಂಪ್ ಅವರು, ನಾನು ಯಾವಾಗಲೂ (ನರೇಂದ್ರ) ಮೋದಿ ಅವರೊಂದಿಗೆ ಸ್ನೇಹಿತನಾಗಿರುತ್ತೇನೆ. ಅವರು ಒಬ್ಬ ಉತ್ತಮ ಹಾಗೂ ಅಧ್ಬುತ ಪ್ರಧಾನಿ. ಆದರೆ ಈ ನಿರ್ದಿಷ್ಟ ಕ್ಷಣದಲ್ಲಿ ಅವರು ಮಾಡುತ್ತಿರುವುದು ನನಗೆ ಇಷ್ಟವಿಲ್ಲ. ಆದರೆ ಭಾರತ ಮತ್ತು ಅಮೆರಿಕ ವಿಶೇಷ ಸಂಬಂಧವನ್ನು ಹೊಂದಿವೆ. ಈ ಬಗ್ಗೆ ಚಿಂತಿಸಲು ಏನೂ ಇಲ್ಲ. ಪ್ರಸ್ತುತ ಪರಿಸ್ಥಿತಿ ಕ್ಷಣಿಕವಷ್ಟೇ.
ನಾವು ಭಾರತವನ್ನು ಕಳೆದುಕೊಂಡಿಲ್ಲ. ಭಾರತ ರಷ್ಯಾದಿಂದ ದೊಡ್ಡ ಪ್ರಮಾಣದ ತೈಲವನ್ನು ಖರೀದಿಸುತ್ತಿದೆ. ಅದು ನಮಗೆ ಬಹಳ ನಿರಾಶೆ ತಂದಿದೆ. ಹೀಗಾಗಿ ಅದನ್ನು ಅವರಿಗೆ ತಿಳಿಸಲು ದೊಡ್ಡ ರೀತಿಯ ಸುಂಕವನ್ನು ವಿಧಿಸಿದ್ದೇವೆ. ನಿಮಗೆ ತಿಳಿದಿರುವಂತೆ ನಾನು ಭಾರತದ ಪ್ರಧಾನಮಂತ್ರಿ (ನರೇಂದ್ರ ಮೋದಿ) ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. 2 ತಿಂಗಳ ಹಿಂದೆ ಮೋದಿ ಅಮೆರಿಕಾದಲ್ಲಿದ್ದರು. ರೋಸ್ ಗಾರ್ಡನ್ ನಲ್ಲಿ ನಾವಿಬ್ಬರೂ ಪತ್ರಿಕಾಗೋಷ್ಠಿ ನಡೆಸಿದ್ದೆವು ಎಂದು ತಿಳಿಸಿದ್ದರು.
ಟ್ರಂಪ್ ಹೇಳಿಕೆ ಬೆನ್ನಲ್ಲೇ ಮೋದಿಯವರೂ ಪ್ರತಿಕ್ರಿಯೆ ನೀಡಿದ್ದರು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವನೆಗಳು ಮತ್ತು ನಮ್ಮ ಸಂಬಂಧಗಳ ಬಗ್ಗೆ ಅವರ ಸಕಾರಾತ್ಮಕ ಮೌಲ್ಯಮಾಪನವನ್ನು ನಾನು ತುಂಬಾ ಗೌರವಿಸುತ್ತೇನೆ. ಅವರ ಭಾವನೆಯು ಸಂಪೂರ್ಣವಾಗಿ ಪರಸ್ಪರ ಪೂರಕವಾಗಿದೆ. ಭಾರತ ಮತ್ತು ಅಮೆರಿಕಗಳು ಬಹಳ ಸಕಾರಾತ್ಮಕ ಮತ್ತು ಭವಿಷ್ಯದ ದೃಷ್ಟಿಕೋನದ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ ಎಂದು ಹೇಳಿದ್ದರು.