ಮಸ್ಸೂರಿ: ಉತ್ತರಾಖಂಡ ಸರ್ಕಾರ, ಯೋಗ ಗುರು ಬಾಬಾ ರಾಮದೇವ್ ಅವರ ಆಪ್ತ ಬಾಲಕೃಷ್ಣ ಅವರಿಗೆ ಸೇರಿದ ಸಂಸ್ಥೆಗೆ ಮಸ್ಸೂರಿಯಲ್ಲಿ "30,000 ಕೋಟಿ ರೂ. ಮೌಲ್ಯದ" 142 ಎಕರೆ ಭೂಮಿಯನ್ನು ಕೇವಲ 1 ಕೋಟಿ ರೂ. ವಾರ್ಷಿಕ ಬಾಡಿಗೆಗೆ ನೀಡಿದೆ ಎಂದು ಉತ್ತರಾಖಂಡ ವಿಧಾನಸಭೆ ವಿರೋಧ ಪಕ್ಷದ ನಾಯಕ ಯಶ್ಪಾಲ್ ಆರ್ಯ ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಸಿಬಿಐ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಬಾಲಕೃಷ್ಣ ಅವರ ಕಂಪನಿ ರಾಜಾಸ್ ಏರೋಸ್ಪೋರ್ಟ್ಸ್ ಆಂಡ್ ಅಡ್ವೆಂಚರ್ ಪ್ರೈವೇಟ್ ಲಿಮಿಟೆಡ್‌ಗೆ 15 ವರ್ಷಗಳ ಕಾಲ ವಾರ್ಷಿಕ 1 ಕೋಟಿ ರೂ. ಬಾಡಿಗೆಗೆ ನೀಡಲಾಗಿರುವ ಜಾರ್ಜ್ ಎವರೆಸ್ಟ್ ಎಸ್ಟೇಟ್‌ನಲ್ಲಿರುವ ಭೂಮಿಯನ್ನು ಸರ್ಕಾರವು ಈ ಹಿಂದೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ 23 ಕೋಟಿ ರೂ. ಸಾಲ ಪಡೆದು ಅಭಿವೃದ್ಧಿಪಡಿಸಿತ್ತು ಎಂದು ಆರ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
"ರಾಜ್ಯ ಸರ್ಕಾರ ADBಯಿಂದ 23 ಕೋಟಿ ರೂ. ಸಾಲ ಪಡೆದು ಅಭಿವೃದ್ಧಿಪಡಿಸಿದ ಸಾವಿರಾರು ಕೋಟಿ ರೂ. ಮೌಲ್ಯದ ಭೂಮಿಯನ್ನು ಖಾಸಗಿ ಕಂಪನಿಗೆ 15 ವರ್ಷಗಳ ಕಾಲ ಬಾಡಿಗೆಗೆ ನೀಡಿದೆ ಎಂದು ಹೇಳಿದ್ದಾರೆ.
"ಸರ್ಕಾರ ಮತ್ತು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯ ಸಮರ್ಥ ಅಧಿಕಾರಿಗಳು ಮಾತ್ರ ಇದು ಯಾವ ರೀತಿಯ ಅಭಿವೃದ್ಧಿ ಮಾದರಿ ಎಂದು ಹೇಳಬಲ್ಲರು" ಎಂದು ಆರ್ಯ ವಾಗ್ದಾಳಿ ನಡೆಸಿದ್ದಾರೆ.
ಉತ್ತರಾಖಂಡ ಪ್ರವಾಸೋದ್ಯಮ ಮಂಡಳಿಯು 2022-23ರಲ್ಲಿ ಮಸ್ಸೂರಿಯಲ್ಲಿ ಸಾಹಸ ಪ್ರವಾಸೋದ್ಯಮಕ್ಕಾಗಿ ಟೆಂಡರ್ ಅನ್ನು ಕರೆದಿತ್ತು. ಟೆಂಡರ್ ಪಡೆದ ಕಂಪನಿಯು 142 ಎಕರೆ ಸ್ಥಳದಲ್ಲಿ ವಸ್ತುಸಂಗ್ರಹಾಲಯ, ವೀಕ್ಷಣಾಲಯ, ಕೆಫೆಟೇರಿಯಾ, ಕ್ರೀಡಾ ಪ್ರದೇಶ, ಪಾರ್ಕಿಂಗ್ ಇತ್ಯಾದಿಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದೆ. ಈ ಟೆಂಡರ್ ಅನ್ನು ರಾಜಾಸ್ ಏರೋಸ್ಪೋರ್ಟ್ಸ್ ಆಂಡ್ ಅಡ್ವೆಂಚರ್ ಪ್ರೈವೇಟ್ ಲಿಮಿಟೆಡ್ ಪಡೆದುಕೊಂಡಿದೆ.