ನವದೆಹಲಿ: 'ಮತ ಕಳ್ಳತನ' ಆರೋಪಗಳ ಕುರಿತು ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಶಿ ಭಾನುವಾರ ತೀವ್ರವಾಗಿ ಟೀಕಿಸಿದ್ದಾರೆ. ಚುನಾವಣಾ ಆಯೋಗವು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ 'ಆಕ್ಷೇಪಾರ್ಹ ಮತ್ತು ಆಕ್ರಮಣಕಾರಿ' ರೀತಿಯಲ್ಲಿ 'ಕೂಗುವ' ಬದಲು ಅವರು ಮಾಡಿರುವ ಆರೋಪಗಳ ಕುರಿತು ತನಿಖೆಗೆ ಆದೇಶಿಸಬೇಕಾಗಿತ್ತು ಎಂದಿದ್ದಾರೆ.
ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಖುರೇಷಿ, ರಾಹುಲ್ ಗಾಂಧಿಯವರು 'ಹೈಡ್ರೋಜನ್ ಬಾಂಬ್'ಗೆ ಹೋಲಿಸುವಂತಹ ಆರೋಪಗಳನ್ನು ಮಾಡುವಾಗ ಬಳಸಿದ ಹೆಚ್ಚಿನ ಪದಗಳು 'ರಾಜಕೀಯ ವಾಕ್ಚಾತುರ್ಯ'ವಾಗಿದ್ದರೂ, ಅವರು ಮಾಡಿರುವ ಆರೋಪಗಳನ್ನು ವಿವರವಾಗಿ ತನಿಖೆ ಮಾಡಬೇಕಾಗಿದೆ ಎಂದು ಪ್ರತಿಪಾದಿಸಿದರು.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ನಡೆಸಿದ ವಿಧಾನದ ಬಗ್ಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತರು ಚುನಾವಣಾ ಆಯೋಗವನ್ನು (EC) ತರಾಟೆಗೆ ತೆಗೆದುಕೊಂಡರು ಮತ್ತು ಅದು 'ಪಂಡೋರಾ ಪೆಟ್ಟಿಗೆಯನ್ನು ತೆರೆಯುತ್ತಿದೆ' ಮಾತ್ರವಲ್ಲದೆ, ಚುನಾವಣಾ ಸಂಸ್ಥೆಯು 'ಕಡಜದ ಗೂಡಿನಲ್ಲಿ' ಕೈ ಹಾಕಿದೆ, ಅದು ಅದಕ್ಕೆ ಹಾನಿ ಮಾಡುತ್ತದೆ' ಎಂದು ಹೇಳಿದರು.
'ಚುನಾವಣಾ ಆಯೋಗದ ಬಗ್ಗೆ ಯಾವುದೇ ಟೀಕೆ ಕೇಳಿಬಂದಾಗ, ನನಗೆ ತುಂಬಾ ಕಾಳಜಿ ಮತ್ತು ನೋವುಂಟಾಗುತ್ತದೆ. ಏಕೆಂದರೆ, ಭಾರತದ ನಾಗರಿಕನಾಗಿ ಮಾತ್ರವಲ್ಲ, ನಾನು ಮಾಜಿ ಸಿಇಸಿ ಆಗಿರುವುದರಿಂದ ಆ ಸಂಸ್ಥೆಯಲ್ಲಿ ಒಂದು ಅಥವಾ ಎರಡು ಇಟ್ಟಿಗೆಗಳನ್ನು ಹಾಕಿದ್ದೇನೆ' ಎಂದು ತಮ್ಮ ಹೊಸ ಪುಸ್ತಕ 'ಡೆಮಾಕ್ರಸೀಸ್ ಹಾರ್ಟ್‌ಲ್ಯಾಂಡ್' ಬಿಡುಗಡೆಗೆ ಮುಂಚಿತವಾಗಿ ಅವರು ಪಿಟಿಐಗೆ ತಿಳಿಸಿದರು.
'ಆ ಸಂಸ್ಥೆಯ ಮೇಲೆ ದಾಳಿ ನಡೆದಾಗ ಅಥವಾ ಯಾವುದೇ ರೀತಿಯಲ್ಲಿ ದುರ್ಬಲಗೊಂಡಾಗ ನನಗೆ ಕಳವಳವಾಗುತ್ತದೆ ಮತ್ತು ಚುನಾವಣಾ ಆಯೋಗವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದರ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಎಲ್ಲ ಶಕ್ತಿಗಳು ಮತ್ತು ಒತ್ತಡಗಳನ್ನು ಎದುರಿಸುವುದು ಅವರ ಜವಾಬ್ದಾರಿಯಾಗಿದೆ' ಎಂದು 2010 ಮತ್ತು 2012ರ ನಡುವೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದ (ಸಿಇಸಿ) ಖುರೇಶಿ ಹೇಳಿದರು.
'ಅವರು ಜನರ ವಿಶ್ವಾಸವನ್ನು ಗೆಲ್ಲಬೇಕು - ನಿಮಗೆ ವಿರೋಧ ಪಕ್ಷಗಳ ವಿಶ್ವಾಸವೂ ಬೇಕು. ನಾನು ಯಾವಾಗಲೂ ವಿರೋಧ ಪಕ್ಷಗಳಿಗೆ ಆದ್ಯತೆ ನೀಡುತ್ತಿದ್ದೆ. ಏಕೆಂದರೆ, ಅವರು ಕಾವಲುನಾಯಿಗಳು. ವಿರೋಧ ಪಕ್ಷವು ಅಧಿಕಾರದಿಂದ ಹೊರಗುಳಿದಿರುವುದರಿಂದ ಅಧಿಕಾರದಲ್ಲಿರುವ ಪಕ್ಷಕ್ಕೆ ವಿರೋಧ ಪಕ್ಷದಷ್ಟು ಮುದ್ದು ಮಾಡುವ ಅಗತ್ಯವಿಲ್ಲ' ಎಂದು ಅವರು ಹೇಳಿದರು.
'ಆದ್ದರಿಂದ ನನ್ನ ಸಿಬ್ಬಂದಿಗೆ (ನಾನು ಸಿಇಸಿ ಆಗಿದ್ದಾಗ) ಸಾಮಾನ್ಯವಾಗಿ ನೀಡುತ್ತಿದ್ದ ಸೂಚನೆಯೆಂದರೆ, ಅವರು (ವಿರೋಧ ಪಕ್ಷ) ಅಪಾಯಿಂಟ್ಮೆಂಟ್ ಬಯಸಿದರೆ, ಅವರಿಗೆ ತಕ್ಷಣ ನೀಡಿ, ಅವರ ಮಾತನ್ನು ಆಲಿಸಿ, ಅವರೊಂದಿಗೆ ಮಾತನಾಡಿ, ಅವರಿಗೆ ಏನಾದರೂ ಸಣ್ಣ ಉಪಕಾರ ಬೇಕಾದರೆ, ಬೇರೆಯವರಿಗೆ ಹಾನಿಯಾಗದಿದ್ದರೆ ಅದನ್ನು ಮಾಡಿ ಎಂಬುವುದಾಗಿತ್ತು' ಎಂದು ಅವರು ಹೇಳಿದರು.
ಇಲ್ಲಿ ವಿರೋಧ ಪಕ್ಷಗಳು ಆಗಾಗ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಗುತ್ತದೆ ಮತ್ತು ವಾಸ್ತವವಾಗಿ, 23 ಪಕ್ಷಗಳು ತಮಗೆ ಅಪಾಯಿಂಟ್‌ಮೆಂಟ್ ಸಿಗುತ್ತಿಲ್ಲ ಮತ್ತು ಯಾರೂ ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಹೇಳಬೇಕಾಗಿ ಬಂದಿದೆ. ಚುನಾವಣಾ ಆಯೋಗವು ರಾಹುಲ್ ಗಾಂಧಿಯವರ ಆರೋಪಗಳ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕೇಳುವ ಬದಲು ತನಿಖೆಗೆ ಆದೇಶಿಸಬೇಕಿತ್ತು ಎಂದು ತಿಳಿಸಿದರು.