ಪಾಟ್ನಾ: ಕ್ಟೋಬರ್-ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಂಪ್ ಗಿಫ್ಟ್ ನೀಡುತ್ತಿದ್ದು, ಸೋಮವಾರ 36,000 ಕೋಟಿ ರೂ. ಮೊತ್ತದ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.
ಇಂದು ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಅವರು ಗಂಗಾ ನದಿಗೆ ಅಡ್ಡಲಾಗಿ ನೇರ ರೈಲು ಸಂಪರ್ಕವನ್ನು ಒದಗಿಸುವ 2,170 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಿಕ್ರಮಶಿಲಾ-ಕಟಾರಿಯಾ ನಡುವಿನ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನಿ ಮೋದಿ ಅವರು, ವಿದ್ಯುತ್, ರೈಲ್ವೆ, ವಿಮಾನ ನಿಲ್ದಾಣ, ವಸತಿ, ನೀರು, ಗ್ರಾಮೀಣಾಭಿವೃದ್ಧಿ, ಕೃಷಿ, ಪಶುಸಂಗೋಪನೆ ಮತ್ತು ಹೊಸ ಮಖಾನಾ ಮಂಡಳಿ ಹಾಗೂ 2,680 ಕೋಟಿಗೂ ಹೆಚ್ಚು ಮೌಲ್ಯದ ಕೋಸಿ-ಮೆಚಿ ಇಂಟ್ರಾ-ಸ್ಟೇಟ್ ನದಿ ಸಂಪರ್ಕ ಯೋಜನೆಯ ಹಂತ 1 ಸೇರಿದಂತೆ ಒಟ್ಟು 36,000 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
4,410 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅರಾರಿಯಾ-ಗಲ್ಗಾಲಿಯಾ(ಠಾಕೂರ್ಗಂಜ್) ನಡುವಿನ ಹೊಸ ರೈಲು ಮಾರ್ಗವನ್ನು ಸಹ ಮೋದಿ ಉದ್ಘಾಟಿಸಿದರು.
ಇದೇ ವೇಳೆ ಪಿಎಂಎವೈ (ಆರ್) ಅಡಿಯಲ್ಲಿ 35,000 ಗ್ರಾಮೀಣ ಫಲಾನುಭವಿಗಳು ಮತ್ತು ಪಿಎಂಎವೈ (ಯು) ಅಡಿಯಲ್ಲಿ 5,920 ನಗರ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿದರು.
"ಮೊದಲನೆಯದಾಗಿ, ನಾನು ನಿಮ್ಮೆಲ್ಲರ ಕ್ಷಮೆಯಾಚಿಸುತ್ತೇನೆ. ಕೋಲ್ಕತ್ತಾದಲ್ಲಿ ನನ್ನ ಕಾರ್ಯಕ್ರಮ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿತು, ಮತ್ತು ಆ ಕಾರಣದಿಂದಾಗಿ, ನಾನು ಇಲ್ಲಿಗೆ ಬರಲು ತಡವಾಯಿತು. ಅದರ ಹೊರತಾಗಿಯೂ, ನೀವು ನಮ್ಮನ್ನು ಆಶೀರ್ವದಿಸಲು ತುಂಬಾ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ" ಎಂದರು.