ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ರಾತ್ರಿ ಇಡೀ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಮಂದಿ ಸಾವಿಗೀಡಾಗಿ, ಮಂಡಿಯಲ್ಲಿ ಬಸ್ ನಿಲ್ದಾಣವೊಂದು ಮುಳುಗಡೆಗೊಂಡಿದೆ.
ಮಂಡಿ ಜಿಲ್ಲೆಯ ಸುಂದರ್‌ನಗರ ಉಪವಿಭಾಗದ ನೆಹ್ರಿ ಪ್ರದೇಶದ ಬೊಯ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮನೆ ಬಿದ್ದು ಮೂವರು ಮೃತಪಟ್ಟಿದ್ದಾರೆ. ಅವಶೇಷಗಳಡಿಯಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ ಎಂದು ಮಂಡಿ ಜಿಲ್ಲಾಧಿಕಾರಿ ಅಪೂರ್ವ್ ದೇವಗನ್ ಹೇಳಿದ್ದಾರೆ.
ನಿರಂತರ ಮಳೆಯಿಂದಾಗಿ ಮಂಡಿಯ ಸೋನ್ ಹಾಗೂ ಭದ್ರಾ ಕಾಲುವೆಯಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಬಸ್ಸು ನಿಲ್ದಾಣಕ್ಕೆ ನೀರು ನುಗ್ಗಿ, ಕಾರ್ಯಾಗಾರ, ಪಂಪ್ ಹೌಸ್, ಅಂಗಡಿಗಳಿಗೆ ಹಾಗೂ 20ಕ್ಕೂ ಅಧಿಕ ಬಸ್‌ಗಳಿಗೆ ಹಾನಿಯುಂಟಾಗಿದೆ.
‘ಧರ್ಮಪುರಿ ಬಸ್ ನಿಲ್ದಾಣದಲ್ಲಿ ಎರಡು ಡಜನ್‌ಗೂ ಅಧಿಕ ಎಚ್‌ಆರ್‌ಟಿಸಿ ಬಸ್, ಅಂಗಡಿಗಳು, ಪಂಪ್ ಹೌಸ್ ಹಾಗೂ ಕಾರ್ಯಾಗಾರಕ್ಕೆ ಹಾನಿ ಉಂಟಾಗಿದೆ’ ಎಂದು ಉಪ ಮುಖ್ಯಮಂತ್ರೊ ಮುಕೇಶ್ ಅಗ್ನಿಹೋತ್ರಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಹಠಾತ್ ಪ್ರವಾಹದಿಂದಾಗಿ ಸ್ಥಳೀಯ ಅಂಗಡಿಯವರು ಮತ್ತು ನಿವಾಸಿಗಳಿಗೆ ಭಾರಿ ನಷ್ಟ ಉಂಟಾಗಿದ್ದು, ನೀರು ಮಾರುಕಟ್ಟೆಗಳು ಮತ್ತು ಮನೆಗಳಿಗೆ ನುಗ್ಗಿ ಸರಕುಗಳು ಮತ್ತು ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ನದಿ ದಂಡೆಯ ಬಳಿಯ ಹಲವಾರು ಮನೆಗಳು ಮತ್ತು ಅಂಗಡಿಗಳು ಜಲಾವೃತಗೊಂಡಿವೆ. 150 ವಿದ್ಯಾರ್ಥಿಗಳನ್ನು ಹೊಂದಿರುವ ಹಾಸ್ಟೆಲ್ ಕೂಡ ಪ್ರವಾಹಕ್ಕೆ ಸಿಲುಕಿದೆ, ಆದರೂ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪ್ರವಾಹದಿಂದಾಗಿ ಅಂಗಡಿಗಳು ಭಾರಿ ನಷ್ಟವನ್ನು ಅನುಭವಿಸಿದ್ದು, ಹಾನಿಯ ಸಂಪೂರ್ಣ ಪ್ರಮಾಣವನ್ನು ಇನ್ನೂ ನಿರ್ಣಯಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ಸ್ವಯಂಸೇವಕರು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಬೆಂಬಲದೊಂದಿಗೆ ಜಿಲ್ಲಾಡಳಿತ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.
ಈ ನಡುವೆ ರಾಜಧಾನಿ ಶಿಮ್ಲಾದಲ್ಲಿರುವ ಹಿಮ್‌ಲ್ಯಾಂಡ್ ಹೋಟೆಲ್ ಸಮೀಪ ಸಂಭವಿಸಿದ ಭೂಕುಸಿತದಿಂದಾಗಿ ಹಲವು ವಾಹನಗಳು ಹೂತು ಹೋಗಿವೆ. ಹಲವು ರಸ್ತೆಗಳು ಬಂದ್ ಆಗಿ ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಯಿತು.
ತಡರಾತ್ರಿ 1 ಗಂಟೆ ಸುಮಾರಿಗೆ ಭಾರಿ ಪ್ರಮಾಣದ ಮಳೆಯಯಾಯಿತು. ಮರಗಳು ಹಾಗೂ ಕಟ್ಟಡಗಳು ಬೀಳುವ ಕಿವಿಗಡಚ್ಚುವ ಶಬ್ದಗಳು ಕೇಳಿಸಿದವು. ಕೂಡಲೇ ನಾವು ನಮ್ಮ ವಾಹನಗಳೊಂದಿಗೆ ಅಲ್ಲಿಂದ ಬಂದೆವು’ ಎಂದು ಭೂಕುಸಿತ ಉಂಟಾಗುವ ವೇಳೆಯಲ್ಲಿ ಹೋಟೆಲ್ ಸಮೀಪ ಕಾರ್ ನಿಲ್ಲಿಸಿದ್ದ ಗೌತಮ್ ಹಾಗೂ ರಾಹುಲ್ ಶುಕ್ಲಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.