ಅಹಮದಾಬಾದ್: ಗುಜರಾತ್‌ನ ಛೋಟಾ ಉದೇಪುರದ ನಿವಾಸಿಗಳು ತಮ್ಮ ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ 35 ವರ್ಷದ ಗರ್ಭಿಣಿ ಮಹಿಳೆಯೊಬ್ಬರನ್ನು ಬಟ್ಟೆ ಜೋಲಿಯಲ್ಲಿ 5 ಕಿ.ಮೀ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕಳೆದ ವರ್ಷ ಇದೇ ರೀತಿಯ ದುರಂತದ ನಂತರ ಹೈಕೋರ್ಟ್ ಆದೇಶದ ಹೊರತಾಗಿಯೂ, ಗುಜರಾತ್ ಸರ್ಕಾರ ಅನೇಕ ಬುಡಕಟ್ಟು ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಕುಟುಂಬಗಳು ತೀವ್ರ ಅಸ್ವಸ್ಥ ರೋಗಿಗಳೊಂದಿಗೆ ಮೈಲುಗಟ್ಟಲೆ ನಡೆಯಬೇಕಾಗಿದ್ದು, ಇದು ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಈ ಪ್ರದೇಶದ ಅಭಿವೃದ್ಧಿಯ ಕಠೋರ ವಾಸ್ತವವನ್ನು ಬಹಿರಂಗಪಡಿಸುತ್ತಿದೆ.
ಛೋಟಾ ಉದೇಪುರದ ಬುಡಕಟ್ಟು ಪ್ರದೇಶವು ಮತ್ತೊಮ್ಮೆ ಹೃದಯ ವಿದ್ರಾವಕ ದುರಂತಕ್ಕೆ ಸಾಕ್ಷಿಯಾಗಿದ್ದು, ಗುಜರಾತ್‌ನಲ್ಲಿ ಅಭಿವೃದ್ಧಿಯ ಕರಾಳ ಸತ್ಯವನ್ನು ಬಹಿರಂಗಪಡಿಸಿದೆ.
ರಸ್ತೆಗಳಿಲ್ಲದ ಕಾರಣ ಯಾವುದೇ ವಾಹನವು ತಮ್ಮ ಹಳ್ಳಿಯನ್ನು ತಲುಪಲು ಸಾಧ್ಯವಾಗದ ಕಾರಣ, ತುರ್ಖೇಡಾ ಗ್ರಾಮದ ಗರ್ಭಿಣಿ ಮಹಿಳೆಯನ್ನು ಸೋಮವಾರ ಐದು ಕಿ.ಮೀ. ದೂರ ಬಟ್ಟೆ ಜೋಲಿಯಲ್ಲಿ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗಮಧ್ಯೆಯೇ ಮಹಿಳೆ ನಿಧನರಾಗಿದ್ದಾರೆ.
ಸಂಜೆ 4 ಗಂಟೆ ಸುಮಾರಿಗೆ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರ ಕುಟುಂಬಕ್ಕೆ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಒರಟು ಭೂಪ್ರದೇಶದ ಮೂಲಕ ನಡೆಯುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. 5 ಕಿ. ಮೀ. ಯಾತನಾಮಯ ಕಾಲ್ನಡಿಗೆಯ ನಂತರ, 108 ಆಂಬ್ಯುಲೆನ್ಸ್ ಮಹಿಳೆಯನ್ನು ಕರೆದುಕೊಂಡು ಹೋಗಿದೆ. ಆದರೆ ದುರಾದೃಷ್ಟವಶಾತ್ ಮಹಿಳೆ ಮಾರ್ಗಮಧ್ಯೆ ಸಾವನ್ನಪ್ಪಿದರು. ಅವರ ಹೆಣ್ಣು ಮಗು ಬದುಕುಳಿದಿದೆ. ಆದರೆ ಇತರ ನಾಲ್ಕು ಚಿಕ್ಕ ಹೆಣ್ಣು ಮಕ್ಕಳು ತಾಯಿಯನ್ನು ಕಳೆದುಕೊಂಡಿದ್ದಾರೆ. ಮಹಿಳೆಗೆ ಇದು ಐದನೇ ಹೆರಿಗೆಯಾಗಿದೆ.