ನೆಲ್ಲೂರು: ನೆರೆಯ ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಟಿಪ್ಪರ್ ಲಾರಿಗೆ ಕಾರು ಢಿಕ್ಕಿಯಾದ ಪರಿಣಾಮ ಕನಿಷ್ಠ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಸಂಗಮ್ ಮಂಡಲದ ಪೆರಾಮನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾರು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ ವೇಗವಾಗಿ ಬಂದ ಮರಳು ಟಿಪ್ಪರ್ ಲಾರಿ ರಾಂಗ್ ರೂಟ್ ನಲ್ಲಿ ಬಂದು ಎದುರಿಗೆ ಬಂದ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದು ನಂತರ ಕಾರನ್ನು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದೆ. ಪರಿಣಾಮವಾಗಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮೃತರಲ್ಲಿ ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ನೆಲ್ಲೂರು ಪೊಲೀಸರು, ಕಾರ್ಯಾಚರಣೆ ನಡೆಸಿ ಕಾರಿನಲ್ಲಿದ್ದ ದೇಹಗಳನ್ನು ಹೊರ ತೆಗೆದಿದ್ದಾರೆ. ಅಪಘಾತಕ್ಕೀಡಾದ ಕಾರು ತಲ್ಲೂರ್ ರಾಧಾ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಅಂತೆಯೇ ಮೃತರನ್ನು ಶೇಷಂ ಶೇರಮ್ಮ (42), ಶೇಷಂ ಬಾಲವೆಂಗಯ್ಯ (40), ತಲ್ಲೂರಿ ರಾಧಾ (38), ತಲ್ಲೂರಿ ಶ್ರೀನಿವಾಸುಲು (42), ತಲ್ಲೂರಿ ಲಕ್ಷ್ಮಿ (40), ಮತ್ತು ತಲ್ಲೂರು ಶ್ರೀನಿವಾಸುಲು ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ನೆಲ್ಲೂರು ಜಿಲ್ಲಾ ಕೇಂದ್ರದ ಮುತ್ತುಕೂರ್ ಗೇಟ್ ಬಳಿಯ ಗುರ್ರಂವರಿ ವೀಧಿ ನಿವಾಸಿಗಳು ಎಂದು ಹೇಳಲಾಗಿದೆ. ಪ್ರಸ್ತುತ ಶವಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ ಆತ್ಮಕೂರಿನಲ್ಲಿರುವ ಯಾರೋ ಪರಿಚಯಸ್ಥರನ್ನು ಭೇಟಿ ಮಾಡಲು ಚಾಲಕ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಜಿಲ್ಲಾ ಸಾರಿಗೆ ಆಯುಕ್ತರು, "ಇಂದು ಪೆರಾಮನ್ ಬಳಿ ಒಂದು ದೊಡ್ಡ ಅಪಘಾತ ಸಂಭವಿಸಿದ್ದು, ಇದರಲ್ಲಿ ಆರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕಾರು ಮತ್ತು ಟಿಪ್ಪರ್ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಿಪ್ಪರ್ ಲಾರಿಯ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಇದು ಸಂಭವಿಸಿದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದಾರೆ.
ಸಚಿವರ ಸಂತಾಪ
ಇನ್ನು ಆಂಧ್ರ ಪ್ರದೇಶ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಅಪಘಾತದ ವಿಚಾರ ತಿಳಿಯುತ್ತಲೇ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಅವರು ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದರು. ಗಾಯಾಳುಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸಚಿವರು ಆದೇಶಗಳನ್ನು ನೀಡಿದರು. ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವರು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿರ್ಲಕ್ಷ್ಯವನ್ನು ಸಹಿಸದಂತೆ ಎಚ್ಚರಿಕೆ ನೀಡಿ ಸಚಿವ ರಾಮಪ್ರಸಾದ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.