ಬೆಂಗಳೂರು: ಮೇ 2023ರ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರನ್ನು "ಸಾಮೂಹಿಕವಾಗಿ" ಡಿಲೀಟ್ ಮಾಡಲು ಹಿಂದಿನ ಬಿಜೆಪಿ ಸರ್ಕಾರದ ಅಡಿಯಲ್ಲಿ ಫಾರ್ಮ್ 7 ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಆರೋಪಿಸಿದ್ದಾರೆ.
ಚುನಾವಣೆಗೆ ಮುನ್ನ ನಮ್ಮ ಪಕ್ಷದ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದ್ದಾರೆ. ಈ ನಡುವೆ, ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ಅಳಂದಲ್ಲಿ ನಡೆದ ಘಟನೆಗಳ ಬಗ್ಗೆ ವಿವರ ನೀಡಿದ್ದಾರೆ.
ಫಾರ್ಮ್ 7 ಎಂಬುದು ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಸೇರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಅಥವಾ ಒಬ್ಬರ ಹೆಸರನ್ನು ಡಿಲೀಟ್ ಮಾಡಲು ಅಥವಾ ಸಾವು ಹಾಗೂ ಸ್ಥಳಾಂತರಗೊಂಡಿದ್ದರೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವಂತೆ ಕೋರುವ ಅರ್ಜಿಯಾಗಿದೆ.
"ಅಳಂದ್(ಕಲಬುರಗಿ ಜಿಲ್ಲೆಯಲ್ಲಿ)ದಲ್ಲಿನ ವೋಟ್ ಚೋರಿಯು ದೊಡ್ಡ ಪ್ರಮಾಣದ ಮತದಾರರ ಅಳಿಸುವಿಕೆಯ ಆಘಾತಕಾರಿ ಪ್ರಕರಣವಾಗಿದೆ. ಮೇ 2023 ರ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ಅಧಿಕಾರದಲ್ಲಿದ್ದಾಗ ಫಾರ್ಮ್ 7 ಅನ್ನು ದುರುಪಯೋಗಪಡಿಸಿಕೊಂಡು ಮತದಾರರನ್ನು ಸಾಮೂಹಿಕವಾಗಿ ಡಿಲೀಟ್ ಮಾಡಲಾಗಿದೆ" ಎಂದು ಖರ್ಗೆ ಹೇಳಿದರು.
ಸ್ವಯಂಚಾಲಿತ ಸಾಫ್ಟ್‌ವೇರ್ ಮತ್ತು ನಕಲಿ ಲಾಗಿನ್‌ಗಳನ್ನು ಬಳಸಿಕೊಂಡು ಒಟ್ಟು 6,018 ಮತದಾರರನ್ನು ಡಿಲೀಟ್ ಮಾಡಲು ಪ್ರಯತ್ನಿಸಲಾಗಿದೆ. "ಪರಿಶೀಲನೆಯಲ್ಲಿ 5,994 ಮತದಾರರು ನಕಲಿ ಎಂದು ಕಂಡುಬಂದಿದೆ. ಕೇವಲ 24 ನಿಜವಾದ ಮತದಾರರು ಮಾತ್ರ ಇದ್ದಾರೆ ಎಂದು ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಂಚನೆ ಪತ್ತೆಯಾಗುವ ಮೊದಲು 2,494 ಮತದಾರರನ್ನು ವಾಸ್ತವವಾಗಿ ಡಿಲೀಟ್ ಮಾಡಲಾಗಿದೆ. ವಿಶೇಷವಾಗಿ ದಲಿತ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಒಳಗೊಂಡ ಪ್ರಬಲ ಕಾಂಗ್ರೆಸ್ ಬೂತ್‌ಗಳನ್ನು ಗುರಿಯಾಗಿಸಿ ಡಿಲೀಟ್ ಮಾಡಲಾಗಿದೆ" ಎಂದು ಖರ್ಗೆ ಆರೋಪಿಸಿದ್ದಾರೆ.
ಒಂದು ಹಂತದಲ್ಲಿ, ಕೇವಲ 14 ನಿಮಿಷಗಳಲ್ಲಿ 12 ಮತದಾರರನ್ನು ಡಿಲೀಟ್ ಮಾಡಲಾಗಿದೆ. ಇದು "ಅತ್ಯಾಧುನಿಕ ಮತ ಚೋರಿ ಕಾರ್ಖಾನೆ" ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಮತ್ತೊಂದು ಪ್ರಕರಣದಲ್ಲಿ, 12 ಮತದಾರರನ್ನು ಅಳಿಸಲು 63 ವರ್ಷದ ಮಹಿಳೆಯ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕ ಸಿಐಡಿ, ಐಪಿ ಲಾಗ್‌ಗಳು, ಒಟಿಪಿ ಟ್ರೇಲ್‌ಗಳು, ಸಾಧನ ಐಡಿಗಳು ಮತ್ತು ಲಾಗಿನ್ ವಿವರಗಳನ್ನು ಕೋರಿ ಭಾರತದ ಚುನಾವಣಾ ಆಯೋಗಕ್ಕೆ 18 ಪತ್ರಗಳನ್ನು ಕಳುಹಿಸಿದೆ. ಆದರೆ ನಿರ್ಣಾಯಕ ಡೇಟಾವನ್ನು ಹಂಚಿಕೊಳ್ಳಲು ಚುನಾವಣಾ ಆಯೋಗ ನಿರಾಕರಿಸಿದೆ ಎಂದು ಆರೋಪಿಸಿದರು.
ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. "ಈ ಡಿಲೀಟ್ ಮಾಡುವ ದಾಖಲೆಗಳನ್ನು ಯಾರು ಅನುಮೋದಿಸಿದರು? ಒಟಿಪಿ ಆಡಿಟ್ ಟ್ರಯಲ್ ಎಲ್ಲಿದೆ? ಅಳಿಸಲಾದ ಮತದಾರರನ್ನು ಯಾವಾಗ ಮರುಸ್ಥಾಪಿಸಲಾಗುತ್ತದೆ? ಇಸಿಐ ಸಿಐಡಿಯೊಂದಿಗೆ ಸಹಕರಿಸಲು ಏಕೆ ನಿರಾಕರಿಸುತ್ತಿದೆ? ಇಸಿಐ ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ?" "ವಂಚನೆ ಇಷ್ಟೊಂದು ಸ್ಪಷ್ಟವಾದಾಗ, ಚುನಾವಣಾ ಆಯೋಗ ಇನ್ನೇನು ಪುರಾವೆಗಳಿಗಾಗಿ ಕಾಯುತ್ತಿದೆ? ಅವರು ಯಾರನ್ನು ರಕ್ಷಿಸುತ್ತಿದ್ದಾರೆ?" ಎಂದು ಅವರು ಕೇಳಿದರು.