ನವದೆಹಲಿ: 2006 ರಲ್ಲಿ ಪಾಕಿಸ್ತಾನದಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಸ್ಥಾಪಕ ಮತ್ತು 26/11 ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನನ್ನು ಭೇಟಿಯಾದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವೈಯಕ್ತಿಕವಾಗಿ ತಮಗೆ ಧನ್ಯವಾದ ಹೇಳಿದ್ದರು ಎಂದು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್) ಭಯೋತ್ಪಾದಕ ಯಾಸಿನ್ ಮಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾನೆ.
2006ರಲ್ಲಿ ಹಫೀಜ್ ಸಯೀದ್‌ನನ್ನು ಭೇಟಿಯಾಗುವ ನನ್ನ ನಿರ್ದಾರ ವೈಯಕ್ತಿಕವಾಗಿರದೇ, ಪಾಕಿಸ್ತಾನದೊಂದಿಗಿನ ಶಾಂತಿ ಪ್ರಕ್ರಿಯೆಯ ಹಿಂಬದಿ ಪ್ರಯತ್ನದ ಭಾಗವಾಗಿತ್ತು. ಭಾರತೀಯ ಗುಪ್ತಚರ ಅಧಿಕಾರಿಗಳ ಕೋರಿಕೆಯ ಮೇರೆಗೆ ನಾನು ಸಯೀದ್‌ನನ್ನು ಭೇಟಿ ಮಾಡಿದ್ದೆ ಎಂದು ಯಾಸಿನ್ ಮಲ್ಲಿಕ್ ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ ಅಫಿಡೆವಿಟ್ ನಲ್ಲಿ ತಿಳಿಸಿದ್ದಾನೆ.
2005ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ, ಪಾಕಿಸ್ತಾನಕ್ಕೆ ಭೇಟಿ ನೀಡುವ ಮೊದಲು ನಾನು ದೆಹಲಿಯಲ್ಲಿ ಗುಪ್ತಚರ ದಳದ (ಐಬಿ) ಆಗಿನ ವಿಶೇಷ ನಿರ್ದೇಶಕ ವಿ.ಕೆ. ಜೋಶಿ ಅವರನ್ನು ಭೇಟಿಯಾಗಿದ್ದೆ.
ಆಗ ಅವರು ಕೇವಲ ಪಾಕಿಸ್ತಾನ ರಾಜಕೀಯ ನಾಯಕತ್ವದೊಂದಿಗೆ ಮಾತ್ರವಲ್ಲದೇ ಹಫೀಜ್ ಸಯೀದ್ ಮತ್ತು ಇತರ ಉಗ್ರವಾದಿಗಳೊಂದಿಗೂ ಮಾತುಕತೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದರು ಎಂದು ಯಾಸಿನ್ ಮಲ್ಲಿಕ್ ತಿಳಿಸಿದ್ದಾನೆ.
ಆ ಸಮಯದಲ್ಲಿ ಭಾರತದ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್, ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಯ ಪ್ರಯತ್ನಗಳನ್ನು ಆರಂಭಿಸಿದ್ದರು. ಈ ಹಿನ್ನಲೆಯಲ್ಲಿ ಅವರ ಪ್ರಯತ್ನಗಳನ್ನು ಬೆಂಬಲಿಸಲು ಹಫೀಜ್ ಸಯೀದ್‌ನನ್ನು ಭೇಟಿ ಮಾಡುವಂತೆ ನನನ್ನು ಕೋರಲಾಗಿತ್ತು ಎಂದು ಯಾಸಿನ್ ಮಲ್ಲಿಕ್ ಸ್ಪೋಟಕ ಮಾಹಿತಿ ಹೊರಹಾಕಿದ್ದಾನೆ.
ಕಳೆದ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹಫೀಜ್ ಸಯೀದ್ ಪಾತ್ರ ಇದೆ ಎಂದು ಹೇಳಲಾಗಿತ್ತು.ಹಫೀಜ್ ಸಯೀದ್ ಜೊತೆಗಿನ ತನ್ನ ಭೇಟಿಯನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸ್ವಾಗತಿಸಿದ್ದರು ಎಂಬುದು ಯಾಸಿನ್ ಮಲ್ಲಿಕ್ ಹೇಳಿಕೆಯ ಅತ್ಯಂತ ಸ್ಫೋಟಕ ಭಾಗವಾಗಿದೆ.
ನಾನು ನನ್ನ ಭೇಟಿಯ ವಿವರಗಳನ್ನು ಗುಪ್ತಚರ ಇಲಾಖೆಯೊಂದಿಗೆ ಹಂಚಿಕೊಂಡೆ. ಆ ಬಳಿಕ ಖುದ್ದು ಪ್ರಧಾನಿ ಸಿಂಗ್ ಅವರು ನನ್ನ ಈ ಪ್ರಯತ್ನಗಳಿಗೆ ಧನ್ಯವಾದ ಅರ್ಪಿಸಿದರು ಎಂದು ಯಾಸಿನ್ ಮಲ್ಲಿಕ್ ಹೇಳಿಕೊಂಡಿದ್ದಾನೆ.