ನವದೆಹಲಿ: 2020 ರ ದೆಹಲಿ ಗಲಭೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (UAPA) ಅಡಿಯಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಮತ್ತು ಮೀರನ್ ಹೈದರ್ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಸೆಪ್ಟೆಂಬರ್ 22 ಕ್ಕೆ ಮುಂದೂಡಿದೆ.
ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಸೇರಿದಂತೆ ಒಟ್ಟು ಒಂಬತ್ತು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್‌ನ ಸೆಪ್ಟೆಂಬರ್ 2 ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೀಠವು 22ಕ್ಕೆ ಮುಂದೂಡಿದೆ.
ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಕಾಳಜಿಯನ್ನು ಉಲ್ಲೇಖಿಸಿ ಪ್ರತಿಭಟನೆಯ ನೆಪದಲ್ಲಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
ಮೊಹಮ್ಮದ್ ಸಲೀಮ್ ಖಾನ್, ಶಿಫಾ-ಉರ್-ರೆಹಮಾನ್, ಅಥರ್ ಖಾನ್, ಅಬ್ದುಲ್ ಖಾಲಿದ್ ಸೈಫಿ ಮತ್ತು ಶಾದಾಬ್ ಅಹ್ಮದ್ ಸೇರಿದಂತೆ 9 ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಪ್ರತ್ಯೇಕ ಹೈಕೋರ್ಟ್ ಪೀಠವು ಮತ್ತೊಬ್ಬ ಆರೋಪಿ ತಸ್ಲೀಮ್ ಅಹ್ಮದ್‌ಗೆ ಜಾಮೀನು ನಿರಾಕರಿಸಿದೆ.
19(1)(ಎ) ವಿಧಿಯ ಅಡಿಯಲ್ಲಿ ಪ್ರತಿಭಟನೆ ಮಾಡುವ ಸಾಂವಿಧಾನಿಕ ಹಕ್ಕನ್ನು ಹೈಕೋರ್ಟ್ ಒಪ್ಪಿಕೊಂಡಿತು. ಆದರೆ ಅದು ಸಂಪೂರ್ಣವಲ್ಲ ಮತ್ತು ಕಾನೂನು ಮಿತಿಗಳಿಗೆ ಬದ್ಧವಾಗಿರಬೇಕು ಎಂದು ಒತ್ತಿ ಹೇಳಿದೆ.
ಪ್ರತಿಭಟನೆ ನಡೆಸುವ ಅನಿಯಂತ್ರಿತ ಹಕ್ಕು ಸಾಂವಿಧಾನಿಕ ಚೌಕಟ್ಟನ್ನು ಹಾನಿಗೊಳಿಸುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಫೆಬ್ರವರಿ 2020 ರಲ್ಲಿ ಭಾರತದ ಪೌರತ್ವ (ತಿದ್ದುಪಡಿ) ಕಾಯ್ದೆ, 2019, (CAA) ವಿರೋಧಿ ಪ್ರತಿಭಟನೆಗಳ ನಡುವೆ ಭುಗಿಲೆದ್ದ ಗಲಭೆಯಲ್ಲಿ 53 ಜನರು ಮೃತಪಟ್ಟು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಕಾರ್ಯಕರ್ತರು 2020 ರಿಂದ ಬಂಧನದಲ್ಲಿದ್ದಾರೆ, ಅವರ ಜಾಮೀನು ಅರ್ಜಿಗಳನ್ನು ಈ ಹಿಂದೆ ವಿಚಾರಣಾ ನ್ಯಾಯಾಲಯ ಮತ್ತು ನಂತರ ಹೈಕೋರ್ಟ್ ವಿಚಾರಣೆ ನಡೆಸಿ ತಿರಸ್ಕರಿಸಿತ್ತು.