ಮುಂಬೈ: ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ ಆರೋಪ ಸಂಬಂಧ ಯುವತಿಯೊಬ್ಬಳಿಂದ ದೂರು ದಾಖಲಾದ ಕೆಲವೇ ಗಂಟೆಗಳ ನಂತರ ಮುಂಬೈ ಉಪನಗರದ ದೇವಸ್ಥಾನದೊಳಗೆ 52 ವರ್ಷದ ಅರ್ಚಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಡಿವಲಿ ಪ್ರದೇಶದ ದೇವಸ್ಥಾನದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅರ್ಚಕರ ಶವ ಪತ್ತೆಯಾಗಿದೆ. 19 ವರ್ಷದ ಯುವತಿ ಮತ್ತು ಆಕೆಯ ತಂದೆ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಾಂಡಿವಲಿ ಪೊಲೀಸ್ ಠಾಣೆಗೆ ತೆರಳಿ ಶುಕ್ರವಾರ ರಾತ್ರಿ 10.30ಕ್ಕೆ ಅರ್ಚಕರು ತನಗೆ ಕರೆ ಮಾಡಿ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಆಹ್ವಾನಿಸಿದ್ದರು ಎಂದು ಆರೋಪಿಸಿದರು.
ಬೆಳಿಗ್ಗೆ ಬಂದು ದೂರು ನೀಡುವಂತೆ ಪೊಲೀಸರು ಯುವತಿ ಮತ್ತು ಆಕೆಯ ತಂದೆಗೆ ತಿಳಿಸಿದ್ದರು. ನಂತರ ಅರ್ಚಕರನ್ನು ಹುಡುಕಲು ಪೊಲೀಸರು ಪ್ರಾರಂಭಿಸಿದರು. ಆದಾಗ್ಯೂ, ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ಹೇಳಿದರು.
ಪಶ್ಚಿಮ ಉಪನಗರದ ಲಾಲ್ಜಿಪಾದ ಗಣೇಶ ನಗರದಲ್ಲಿರುವ ದೇವಸ್ಥಾನದೊಳಗೆ ಅರ್ಚಕರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಪೊಲೀಸರಿಗೆ ನಂತರ ತಿಳಿದುಬಂದಿದೆ. ಯಾವುದೇ ಆತ್ಮಹತ್ಯಾ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆಕಸ್ಮಿಕ ಸಾವಿನ ವರದಿ (ಎಡಿಆರ್) ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.