ಅಯೋಧ್ಯೆ: ರಾಮ ಜನ್ಮಭೂಮಿಯ ಗೆಸ್ಟ್ಹೌಸ್ನಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸೆಕ್ಸ್ ದಂಧೆಯನ್ನು ಅಯೋಧ್ಯೆಯ ಪೊಲೀಸರು ಭೇದಿಸಿದ್ದು, 11 ಮಹಿಳೆಯರು ಸೇರಿದಂತೆ 14 ಜನರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಮತ್ತು ಶನಿವಾರ ಪೊಲೀಸರು ಗೆಸ್ಟ್ಹೌಸ್ ಮೇಲೆ ದಾಳಿ ನಡೆಸಿ, 11 ಮಹಿಳೆಯರನ್ನು ಬಂಧಿಸಿದ್ದಾರೆ. ಅತಿಥಿ ಗೃಹದ ಮಾಲೀಕ ಗಣೇಶ್ ಅಗರ್ವಾಲ್ ಮತ್ತು ಅವರ ಇಬ್ಬರು ಸಹಚರರನ್ನು ಸಹ ಬಂಧಿಸಲಾಗಿದೆ.
ಪೊಲೀಸರು ಮಧ್ಯರಾತ್ರಿ ಅತಿಥಿ ಗೃಹದ ಮೇಲೆ ದಾಳಿ ನಡೆಸಿ, 14 ಜನರನ್ನು ಬಂಧಿಸಲಾಗಿದೆ ಎಂದು ವೃತ್ತ ಅಧಿಕಾರಿ (ನಗರ) ಶೈಲೇಂದ್ರ ಸಿಂಗ್ ಹೇಳಿದ್ದಾರೆ.
"ದಾಳಿ ನಡೆಸಿದಾಗ ಕೋಣೆಗಳಲ್ಲಿದ್ದ ಮಹಿಳೆಯರು ಓಡಿಹೋಗಲು ಪ್ರಯತ್ನಿಸಿದರು. ಆದರೆ ಹೊರಗೆ ನಿಯೋಜಿಸಲಾದ ಮಹಿಳಾ ಪೊಲೀಸ್ ಸಿಬ್ಬಂದಿ ಅವರನ್ನು ಹಿಡಿದಿದ್ದಾರೆ". "ಬಂಧಿತ ಮಹಿಳೆಯರನ್ನು ನಂತರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು" ಎಂದು ಅವರು ತಿಳಿಸಿದ್ದಾರೆ.
ಅತಿಥಿ ಗೃಹದ ಮಾಲೀಕರು ಬಿಹಾರ ಮತ್ತು ಗೋರಖ್‌ಪುರದಿಂದ ಮಹಿಳೆಯರನ್ನು ಕರೆತಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಸಿಂಗ್ ಹೇಳಿದ್ದಾರೆ.
"ಅನುಮಾನ ಬರದಂತೆ ನೋಡಿಕೊಳ್ಳಲು ಮಹಿಳೆಯರನ್ನು ಆವರಣದಿಂದ ಹೊರಹೋಗಲು ಬಿಟ್ಟಿಲ್ಲ. ಅತಿಥಿ ಗೃಹದೊಳಗೆ ಅವರಿಗೆ ಆಹಾರ ಮತ್ತು ಇತರ ಅವಶ್ಯಕ ವಸ್ತುಗಳನ್ನು ಒದಗಿಸಿದ್ದಾರೆ" ಎಂದು ಅವರು ತಿಳಿಸಿದರು.
ಅಯೋಧ್ಯೆಯಲ್ಲಿ ಇಂತಹ ಹಲವಾರು ದಂಧೆಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
"ಶೀಘ್ರದಲ್ಲೇ ನಾವು ಈ ಪವಿತ್ರ ನಗರವನ್ನು ಇಂತಹ ದಂಧೆಕೋರರಿಂದ ಮುಕ್ತಗೊಳಿಸುತ್ತೇವೆ" ಎಂದು ಸಿಂಗ್ ಹೇಳಿದರು.