ನವದೆಹಲಿ: ತಾವು ಇಡಿ ಮತ್ತು ಸಿಬಿಐ ಅಧಿಕಾರಿಗಳು ಹೇಳಿಕೊಂಡು, ಸೈಬರ್ ವಂಚಕರು ದಕ್ಷಿಣ ದೆಹಲಿಯ ಗುಲ್ಮೋಹರ್ ಪಾರ್ಕ್ ಪ್ರದೇಶದ ನಿವೃತ್ತ ಬ್ಯಾಂಕರ್ ಒಬ್ಬರನ್ನು ಸುಮಾರು ಒಂದು ತಿಂಗಳ ಕಾಲ "ಡಿಜಿಟಲ್ ಅರೆಸ್ಟ್" ಮಾಡುವ ಮೂಲಕ 23 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಆರೋಪಿಗಳು, ನಿವೃತ್ತ ಬ್ಯಾಂಕರ್ ಗೆ ನಿಮ್ಮ ಆಧಾರ್ ಕಾರ್ಡ್, ಮಾದಕ ದ್ರವ್ಯ ಸಾಗಣೆ, ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದೆ ಎಂದು ಹೇಳಿ, ತನಿಖೆಯ ನೆಪದಲ್ಲಿ ಆತನನ್ನು ಫ್ಲಾಟ್ ಒಳಗೆ ಇರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
"ವಂಚಕರು ಆತನನ್ನು ಮನೆಯಿಂದ ಹೊರಗೆ ಹೋಗದಂತೆ ಸೂಚಿಸಿದ್ದು, ಒಂದು ತಿಂಗಳ ಅವಧಿಯಲ್ಲಿ ವ್ಯಕ್ತಿಯ ಉಳಿತಾಯದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, 78 ವರ್ಷದ ಬಲಿಪಶು, ತನ್ನ ದೂರಿನಲ್ಲಿ ಆಗಸ್ಟ್ 4 ರಂದು ಮುಂಬೈ ಪೊಲೀಸ್ ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ಕರೆ ಬಂದಿತು ಎಂದು ಹೇಳಿದ್ದಾರೆ. ಕರೆ ಮಾಡಿದವರು ಆತನನ್ನು ಮಾದಕ ದ್ರವ್ಯ ಸಾಗಣೆ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪರ್ಕಿಸಲಾಗಿದೆ ಎಂದು ತಿಳಿಸಿದ್ದಾರೆ.
ತರುವಾಯ, ಇಡಿ ಮತ್ತು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು, ವಂಚಕರು ಆತನನ್ನು ಸಂಪರ್ಕಿಸಿದ್ದಾರೆ. "ಭಯದಿಂದ, ನಿವೃತ್ತ ಬ್ಯಾಂಕ್, ಅವರ ಸೂಚನೆಗಳನ್ನು ಪಾಲಿಸಿದ್ದಾರೆ ಮತ್ತು ವಂಚಕರು ನಿರ್ದಿಷ್ಟಪಡಿಸಿದ ಖಾತೆಗಳಿಗೆ ತನ್ನ ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸಿದ್ದಾರೆ. ಆರೋಪಿಗಳು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ವಂಚಕರ ಈ ಕೃತ್ಯ ಸೆಪ್ಟೆಂಬರ್ 4 ರವರೆಗೆ ಮುಂದುವರೆದಿದೆ. ನಂತರ ವಂಚಕರು, ಆತನನ್ನು ಸಂಪರ್ಕಿಸುವುದನ್ನು ನಿಲ್ಲಿಸಿದರು. ಬಳಿಕ ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡ ವ್ಯಕ್ತಿ ಸೆಪ್ಟೆಂಬರ್ 19 ರಂದು NCRP ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದಾರೆ.
ಎಫ್‌ಐಆರ್ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು, ವಂಚನೆಗೊಳಗಾದ ಮೊತ್ತದಲ್ಲಿ 12.11 ಕೋಟಿ ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಫ್ರೀಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣದ ಜಾಡು ಹಿಡಿದಾಗ, ಹಣವನ್ನು ಹಲವು ಖಾತೆಗಳಿಗೆ ವರ್ಗಾಯಿಸಿ, ದೇಶದ ವಿವಿಧ ಭಾಗಗಳಿಂದ ಡ್ರಾ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಇಡೀ ಪ್ರಕರಣ ತನಿಖೆಯಲ್ಲಿದೆ. ಈಗಾಗಲೇ ಹಲವಾರು ತಂಡಗಳು ಈ ಬಗ್ಗೆ ತನಿಖೆ ಮಾಡುತ್ತಿವೆ. ಪೊಲೀಸರು ಶೀಘ್ರದಲ್ಲೇ ಪ್ರಕರಣವನ್ನು ಭೇದಿಸಲಿದ್ದಾರೆ ಮತ್ತು ಡಿಜಿಟಲ್ ಬಂಧನದ ಹಿಂದಿನ ಆರೋಪಿಗಳನ್ನು ಬಂಧಿಸಲಿದ್ದಾರೆ" ಎಂದು ಅಧಿಕಾರಿ ಹೇಳಿದ್ದಾರೆ.