ಪ್ರಯಾಗರಾಜ್: ಕಾನ್ಪುರ-ವಾರಣಾಸಿ ಹೆದ್ದಾರಿಯಲ್ಲಿ ಸೋಮವಾರ ಅಪರಿಚಿತ ವಾಹನವೊಂದು, ಕೆಟ್ಟು ನಿಂತಿದ್ದ ಎಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗಾ ನಗರ ಪ್ರದೇಶದ ಬಿಗಾಹಿಯಾ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಉಪ ಪೊಲೀಸ್ ಆಯುಕ್ತ(ಗಂಗಾ ನಗರ) ಕುಲದೀಪ್ ಗುಣವತ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಎಸ್‌ಯುವಿ ಕೆಟ್ಟು ರಸ್ತೆಬದಿಯಲ್ಲಿ ನಿಂತಿತ್ತು. ಅದರಲ್ಲಿದ್ದ ನಾಲ್ವರು ಪ್ರಯಾಣಿಕರು ಕಾರಿನ ಮುಂದೆ ಮಲಗಿದ್ದರು ಮತ್ತು ಮೂವರು ಮಹಿಳೆಯರು ಒಳಗೆ ವಿಶ್ರಾಂತಿ ಪಡೆಯುತ್ತಿದ್ದರು.
ಮೃತರನ್ನು ಕಾನ್ಪುರ ನಿವಾಸಿಗಳಾದ ಸುರೇಶ್ ಸೈನಿ, ಸುರೇಶ್ ಬಾಜ್‌ಪೈ, ಅವರ ಪತ್ನಿ ಮತ್ತು ರಾಮಸಾಗರ್ ಅವಸ್ಥಿ ಎಂದು ಗುರುತಿಸಲಾಗಿದೆ ಎಂದು ಗುಣವತ್ ಹೇಳಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನದ ಚಾಲಕನನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.