ನವದೆಹಲಿ: ಅಮೆರಿಕದ ಸುಂಕ ಏರಿಕೆ ಬಳಿಕ ಹಳ್ಳ ಹಿಡಿದಿರುವ ಭಾರತ-ಅಮೆರಿಕ ಸಂಬಂಧ ಸುಧಾರಣೆ ಕುರಿತು ಚರ್ಚೆಗಳು ತೀವ್ರವಾಗಿರುವಂತೆಯೇ ಭಾರತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಪರಸ್ಪರ ಭೇಟಿಯಾಗಿದ್ದಾರೆ.
ಭಾರತ ರಷ್ಯಾದ ತೈಲ ಖರೀದಿಯನ್ನು ಮುಂದುವರೆಸಿದ್ದಕ್ಕಾಗಿ ಅಮೆರಿಕ ಭಾರತದ ಪ್ರಮುಖ ರಫ್ತುಗಳ ಮೇಲೆ ತೀವ್ರ ಸುಂಕಗಳನ್ನು ವಿಧಿಸಿದ ನಂತರ ಸೋಮವಾರ ನ್ಯೂಯಾರ್ಕ್‌ನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಮೊದಲ ಬಾರಿಗೆ ವೈಯಕ್ತಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಜೈಶಂಕರ್-ರುಬಿಯೊ ಚರ್ಚೆಯು ಆರ್ಥಿಕ ಸಹಕಾರ, ಇಂಧನ ಭದ್ರತೆ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಪ್ರಾದೇಶಿಕ ಸ್ಥಿರತೆ ಸೇರಿದಂತೆ ವ್ಯಾಪಕ ಶ್ರೇಣಿಯ ದ್ವಿಪಕ್ಷೀಯ ಮತ್ತು ಜಾಗತಿಕ ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ನಂತರ, ಜೈಶಂಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಎರಡೂ ಕಡೆಯವರು "ಆದ್ಯತೆಯ ಕ್ಷೇತ್ರಗಳಲ್ಲಿ ನಿರಂತರ ಮಾತುಕತೆಯ ಮಹತ್ವವನ್ನು" ಒಪ್ಪಿಕೊಂಡಿದ್ದಾರೆ, ಇದು ಹೆಚ್ಚುತ್ತಿರುವ ವ್ಯಾಪಾರ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಸಂವಾದವನ್ನು ಮುಕ್ತವಾಗಿಡುವ ಪರಸ್ಪರ ಉದ್ದೇಶವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
"ನಮ್ಮ ಸಂಭಾಷಣೆಯು ಪ್ರಸ್ತುತ ಕಾಳಜಿಯ ಹಲವಾರು ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಒಳಗೊಂಡಿದೆ. ಆದ್ಯತೆಯ ಕ್ಷೇತ್ರಗಳಲ್ಲಿ ಪ್ರಗತಿಗೆ ನಿರಂತರ ಮಾತುಕತೆಯ ಮಹತ್ವದ ಬಗ್ಗೆ ಒಪ್ಪಿಕೊಂಡಿದ್ದೇವೆ" ಎಂದು ಜೈಶಂಕರ್ ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಸಂದರ್ಭದಲ್ಲಿ ಈ ಸಭೆ ನಡೆದಿದ್ದು, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ವಾಷಿಂಗ್ಟನ್‌ನಲ್ಲಿ ಭಾರತ-ಯುಎಸ್ ವ್ಯಾಪಾರ ಮಾತುಕತೆಗಳು ಪುನರಾರಂಭಗೊಂಡಿರುವಂತೆಯೇ ಈ ಸಭೆ ನಡೆದಿರುವುದು ವ್ಯಾಪಕ ಕುತೂಹಲ ಕೆರಳಿಸಿದೆ.
ಈ ಹಿಂದೆ ಭಾರತದ ಕುರಿತು ಆಕ್ರಮಣಕಾರಿಯಾಗಿ ಮಾತನಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿನ ದಿನಗಳಲ್ಲಿ ಕೊಂಚ ಭಾರತದ ಕುರಿತು ಮೃದು ಧೋರಣೆ ತಳೆದಿರುವಂತಿದೆ. ಇದಕ್ಕೆ ಅವರ ಭಾರತದ ಕುರಿತ ಮಾತುಗಳು ಇಂಬು ನೀಡುತ್ತಿದ್ದು ಇದೇ ಹೊತ್ತಿನಲ್ಲಿ ಜೈಶಂಕರ್ ಮತ್ತು ರೂಬಿಯೋ ಮಾತುಕತೆ ಮಹತ್ವ ಪಡೆದುಕೊಂಡಿದೆ.