ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರ್‌ಜೆಡಿಯ ತೇಜಸ್ವಿ ಯಾದವ್ ಅವರನ್ನು ಪಕ್ಷ ಒಪ್ಪಿಕೊಂಡಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಬುಧವಾರ ಹೇಳಿದ್ದಾರೆ.
ಇಂದು ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖೇರಾ, "ನಾವು ವಿಷಯಗಳ ಮೇಲೆ ಸ್ಪರ್ಧಿಸುತ್ತಿದ್ದೇವೆ. ಮುಖ್ಯಮಂತ್ರಿ ಮುಖ ನಿಮ್ಮ ಮುಂದೆಯೇ ಇದೆ. ಎಲ್ಲವೂ ಎಲ್ಲರಿಗೂ ಗೊತ್ತಿದೆ" ಎಂದರು.
2020 ರಲ್ಲಿ ತೇಜಸ್ವಿ ಅವರನ್ನು ಬೆಂಬಲಿಸಿದ ಕಾಂಗ್ರೆಸ್, ಈ ಬಾರಿ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲು ಹಿಂಜರಿಯುತ್ತಿದೆಯೇ? ಎಂಬ ಪ್ರಶ್ನೆಗೆ, "ಸೂರ್ಯ ಆಕಾಶದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿರುವಾಗ, ನೀವು ಅದನ್ನು ಘೋಷಿಸುವ ಅಗತ್ಯವಿಲ್ಲ" ಎಂದು ಖೇರಾ ಮಾರ್ಮಿಕವಾಗಿ ನುಡಿದರು.
ಪಾಟ್ನಾದಲ್ಲಿ ಸಿಡಬ್ಲ್ಯೂಸಿ ಸಭೆ ನಡೆಸುವುದು ದುರ್ಬಲವೆಂದು ಪರಿಗಣಿಸಲಾದ ರಾಜ್ಯದಲ್ಲಿ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನವಾಗಿದೆ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸೇರಿದಂತೆ ಎನ್‌ಡಿಎ ನಾಯಕರ ಹೇಳಿಕೆಗಳನ್ನು ಖೇರಾ ತಳ್ಳಿಹಾಕಿದರು.
"ಇದು ಯಾವುದೇ ಶಕ್ತಿ ಪ್ರದರ್ಶನವಲ್ಲ. ಸಿಪಿಐ(ಎಂಎಲ್) ಲಿಬರೇಶನ್, ಸಿಪಿಐ(ಎಂ), ಸಿಪಿಐ ಮತ್ತು ಮುಖೇಶ್ ಸಾಹ್ನಿ ಅವರ ವಿಕಾಸಶೀಲ ಇನ್ಸಾನ್ ಪಾರ್ಟಿಯನ್ನು ಒಳಗೊಂಡಿರುವ ಇಂಡಿಯಾ ಮೈತ್ರಿಕೂಟದೊಳಗಿನ ಸೀಟು ಹಂಚಿಕೆ ಕುರಿತು ಶೀಘ್ರದಲ್ಲೇ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಹೇಳಿದರು.
ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಬಿಹಾರದಲ್ಲಿ ಸಿಡಬ್ಲ್ಯೂಸಿ ಸಭೆಯನ್ನು ನಡೆಸುವ ಮಹತ್ವದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಖೇರಾ, "ಮತ ಕಳ್ಳತನ ಕೂಡ ಮೊದಲ ಬಾರಿಗೆ ನಡೆದಿದೆ" ಎಂದು ತಿರುಗೇಟು ನೀಡಿದರು.
"ಇಲ್ಲಿ ನಡೆಯುತ್ತಿರುವ ಸಿಡಬ್ಲ್ಯೂಸಿ ಸಭೆಯು ಬಿಹಾರ ಚುನಾವಣೆಯ ಬಗ್ಗೆ ಮಾತ್ರವಲ್ಲ. ಇದು ನಮ್ಮ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುವ ಬಗ್ಗೆ" ಎಂದು ಖೇರಾ ಹೇಳಿದರು.