ನವದೆಹಲಿ: ಹೆಚ್ಚಿನ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಚುನಾವಣಾ ಆಯೋಗವು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅಂಚೆ ಮತಪತ್ರಗಳ ಎಣಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ.
ಇಲ್ಲಿಯವರೆಗೆ, ಎಣಿಕೆಯ ದಿನದಂದು, ಅಂಚೆ ಮತಪತ್ರಗಳ ಎಣಿಕೆ ಬೆಳಗ್ಗೆ 8 ಗಂಟೆಗೆ ಮತ್ತು ಇವಿಎಂ ಮತಗಳ ಎಣಿಕೆ ಬೆಳಗ್ಗೆ 8:30 ಕ್ಕೆ ಪ್ರಾರಂಭವಾಗುತ್ತದೆ.
ಹಿಂದಿನ ಸೂಚನೆಗಳ ಪ್ರಕಾರ, ಅಂಚೆ ಮತಪತ್ರಗಳ ಎಣಿಕೆಯ ಹಂತವನ್ನು ಲೆಕ್ಕಿಸದೆ ಇವಿಎಂ ಎಣಿಕೆ ಸೈದ್ಧಾಂತಿಕವಾಗಿ ಮುಂದುವರಿಯಬಹುದು ಮತ್ತು ಅಂಚೆ ಮತಪತ್ರಗಳ ಎಣಿಕೆ ಪೂರ್ಣಗೊಳ್ಳುವ ಮೊದಲು ಇವಿಎಂ ಮತ ಎಣಿಕೆ ಪೂರ್ಣಗೊಳಿಸಬಹುದಾಗಿತ್ತು.
ಆದರೆ ಎಣಿಕೆ ಪ್ರಕ್ರಿಯೆಯಲ್ಲಿ ಏಕರೂಪತೆ ಮತ್ತು ಅತ್ಯಂತ ಸ್ಪಷ್ಟತೆಯನ್ನು ಖಚಿತಪಡಿಸಿಕೊಳ್ಳಲು, ಚುನಾವಣಾ ಆಯೋಗ ಇವಿಎಂಗಳ ಮತ ಎಣಿಕೆಗೂ ಮೊದಲು ಅಂಚೆ ಮತಪತ್ರಗಳ ಎಣಿಕೆ ಪೂರ್ಣಗೊಳಿಸಲು ನಿರ್ಧರಿಸಿದೆ. ಈಗ ಅಂಚೆ ಮತಪತ್ರಗಳ ಎಣಿಕೆ ನಡೆಯುತ್ತಿರುವ ಎಣಿಕೆ ಕೇಂದ್ರದಲ್ಲಿ ಅಂತಿಮ ಸುತ್ತಿನ ಇವಿಎಂ ಎಣಿಕೆ ಕೈಗೊಳ್ಳುವ ಮುನ್ನ ಅಂಚೆ ಮತಪತ್ರಗಳ ಎಣಿಕೆ ಪೂರ್ಣಗೊಳಿಸಲು ನಿರ್ಧರಿಸಿದೆ.
ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಈ ಹೊಸ ನಿಯಮ ಮೊದಲು ಜಾರಿಗೆ ತರಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಹೆಚ್ಚಿನ ಸಂಖ್ಯೆಯ ಅಂಚೆ ಮತಪತ್ರಗಳಿರುವ ಸಂದರ್ಭಗಳಲ್ಲಿ, ಯಾವುದೇ ವಿಳಂಬವಾಗದಂತೆ ಮತ್ತು ಎಣಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಲು ಚುನಾವಣಾಧಿಕಾರಿಗಳು ಸಾಕಷ್ಟು ಸಂಖ್ಯೆಯ ಮೇಜುಗಳು ಮತ್ತು ಎಣಿಕೆ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು ಎಂದು ಆಯೋಗವು ನಿರ್ದೇಶಿಸಿದೆ.
ಅಂಗವಿಕಲರು ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನಕ್ಕೆ ಆಯೋಗ ಇತ್ತೀಚೆಗೆ ಅವಕಾಶ ನೀಡಿದ ನಂತರ ಅಂಚೆ ಮತಪತ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.