ನವದೆಹಲಿ: ಭಾರತೀಯ ವಾಯುಪಡೆಗೆ 97 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನೊಂದಿಗೆ ರಕ್ಷಣಾ ಸಚಿವಾಲಯ ಗುರುವಾರ ರೂ. 62,370 ಕೋಟಿ ಒಪ್ಪಂದವನ್ನು ಮಾಡಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಯ ಕ್ಯಾಬಿನೆಟ್ ಸಮಿತಿ (CCS)ಮೆಗಾ ಖರೀದಿಗೆ ಅನುಮೋದನೆ ನೀಡಿದ ಒಂದು ತಿಂಗಳ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಸರ್ಕಾರಿ ಸ್ವಾಮ್ಯದ ಕಂಪನಿಗೆ ನೀಡಲಾದ ಎರಡನೇ ಒಪ್ಪಂದವಾಗಿದೆ.
ಈ ಹಿಂದೆ ಫೆಬ್ರವರಿ 2021 ರಲ್ಲಿ IAF ಗಾಗಿ 83 ತೇಜಸ್ MK-1A ಜೆಟ್‌ಗಳನ್ನು ಖರೀದಿಸಲು HAL ನೊಂದಿಗೆ ರೂ. 48,000 ಕೋಟಿ ಒಪ್ಪಂದವನ್ನು ರಕ್ಷಣಾ ಸಚಿವಾಲಯ ಮಾಡಿಕೊಂಡಿತ್ತು. ಭಾರತೀಯ ವಾಯುಪಡೆಗಾಗಿ 97 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ಹೆಚ್ ಎಎಲ್ ಜೊತೆಗೆ ರೂ. 62,370 ಕೋಟಿ ವೆಚ್ಚದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸುಧಾರಿತ ಜೆಟ್ ಸ್ವಯಂ ರಕ್ಷಾ ಕವಚ ಮತ್ತು ಕಂಟ್ರೋಲ್ ಆಕ್ಯೂವೇಟರ್‌ಗಳನ್ನು ಒಳಗೊಂಡಿದ್ದು, 2027-28 ರಲ್ಲಿ ವಿತರಣೆ ಪ್ರಾರಂಭವಾಗಲಿದೆ. ಏಕ-ಎಂಜಿನ್ Mk-1A IAF ನ MiG-21 ಯುದ್ಧವಿಮಾನಗಳಿಗೆ ಬದಲಿಯಾಗಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಐಎಎಫ್ ತನ್ನ ಯುದ್ಧ ವಿಮಾನಗಳ ಸಂಖ್ಯೆಯು ಅಧಿಕೃತವಾಗಿ ಮಂಜೂರಾದ 42 ರಿಂದ 31 ಕ್ಕೆ ಇಳಿದಿರುವುದರಿಂದ ಹೊಸ ಜೆಟ್ ಗಳ ಖರೀದಿಗೆ ಎದುರು ನೋಡುತ್ತಿದೆ.
ತೇಜಸ್ ಬಹು-ಪಾತ್ರದ ಯುದ್ಧ ವಿಮಾನವಾಗಿದ್ದು, ಹೆಚ್ಚಿನ ಬೆದರಿಕೆಯ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ವಾಯು ರಕ್ಷಣೆ, ಕಡಲ ಕಣ್ಗಾವಲು ಮತ್ತು ದಾಳಿಯ ಪಾತ್ರ ನಿರ್ವಹಿಸುವುದಕ್ಕೆ ತಕ್ಕಂತೆ ಈ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.