ಲೆಹ್: ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ಗುರುವಾರ ತಮ್ಮ ಜೈಲು ಶಿಕ್ಷೆಯು ಸರ್ಕಾರಕ್ಕೆ ತಮ್ಮ ಸ್ವಾತಂತ್ರ್ಯಕ್ಕಿಂತ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.
ಲಡಾಖ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಆರೋಪ ಮಾಡಿರುವ ಕೇಂದ್ರ ಗೃಹ ಸಚಿವಾಲಯದ ಕ್ರಮವನ್ನು "ಬಲಿಪಶು ಮಾಡುವ ತಂತ್ರ" ಎಂದು ವಾಂಗ್ಚುಕ್ ಟೀಕಿಸಿದ್ದಾರೆ.
ಬುಧವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಲಡಾಖ್ ಗೆ ರಾಜ್ಯದ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಗೆ ಒತ್ತಾಯಿಸಿ ಉಪವಾಸ ನಡೆಸುತ್ತಿದ್ದ ವಾಂಗ್ಚುಕ್ ನೀಡಿದ ಹೇಳಿಕೆಗಳು ಯುವಕರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದೆ ಎಂದು ಹೇಳಿದೆ.
ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಾಂಗ್‌ಚುಕ್, ನನ್ನನ್ನು ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್‌ಎ) ಅಡಿಯಲ್ಲಿ ಬಂಧಿಸಲು ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.
"ಅವರು ನನ್ನನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಎರಡು ವರ್ಷಗಳ ಕಾಲ ಜೈಲಿಗೆ ಹಾಕಲು ಯೋಜಿಸುತ್ತಿದ್ದಾರೆ. "ನಾನು ಅದಕ್ಕೆ ಸಿದ್ಧನಿದ್ದೇನೆ. ಆದರೆ ನನ್ನ ಜೈಲು ಶಿಕ್ಷೆಯು ಸರ್ಕಾರಕ್ಕೆ ಮತ್ತಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು". ಜೈಲಿನಲ್ಲಿರುವ ವಾಂಗ್‌ಚುಕ್, ಸ್ವತಂತ್ರವಾಗಿರುವ ವಾಂಗ್‌ಚುಕ್ ಗಿಂತಲೂ ಹೆಚ್ಚು ತೊಂದರೆ ಕೊಡಬಹುದು ಎಂದು ಎಚ್ಚರಿಸಿದರು.
ಹಿಂಸಾಚಾರ ಸ್ಫೋಟಕ್ಕೆ ದೀರ್ಘಕಾಲದ ಕುಂದುಕೊರತೆಗಳ ಮೇಲಿನ ಕೋಪ, ಮುಖ್ಯವಾಗಿ ಈ ಪ್ರದೇಶದ ಯುವಕರಲ್ಲಿನ ಹತಾಶೆಯೇ ಕಾರಣ ಮತ್ತು ನಿಜವಾದ ಕಾರಣ "ಆರು ವರ್ಷಗಳಿಂದ ನಿರುದ್ಯೋಗ ಹಾಗೂ ಪ್ರತಿ ಹಂತದಲ್ಲೂ ಈಡೇರದ ಭರವಸೆಗಳು" ಎಂದು ಹೋರಾಟಗಾರ ಬಲವಾಗಿ ಹೇಳಿದ್ದಾರೆ.
ಸರ್ಕಾರವು ಭಾಗಶಃ ಉದ್ಯೋಗ ಮೀಸಲಾತಿಯಲ್ಲಿ ಯಶಸ್ಸು ಸಾಧಿಸಿದೆ ಎಂದು ಹೇಳಿಕೊಳ್ಳುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ. ಲಡಾಖ್‌ನ ಬುಡಕಟ್ಟು ಸ್ಥಾನಮಾನ ಮತ್ತು ದುರ್ಬಲ ಪರಿಸರವನ್ನು ರಕ್ಷಿಸಲು ರಾಜ್ಯದ ಸ್ಥಾನಮಾನ ಹಾಗೂ ಸಂವಿಧಾನದ ರಕ್ಷಣೆ ಬೇಡಿಕೆ ಕಳೆದ ಐದು ವರ್ಷಗಳ ಶಾಂತಿಯುತ ಮನವಿಗಳ ನಂತರವೂ "ಈಡೇರಿಸಿಲ್ಲ" ಎಂದು ಅವರು ಹೇಳಿದರು.
ನನ್ನನ್ನು "ಬಲಿಪಶು ಮಾಡುವ ತಂತ್ರ"ವನ್ನು ಬಳಸುವ ಮೂಲಕ, ಸರ್ಕಾರವು "ವಾಸ್ತವವಾಗಿ ಶಾಂತಿಗಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ", ಬದಲಿಗೆ ಜನರ ಪ್ರಮುಖ ಬೇಡಿಕೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಮೂಲಕ ಪರಿಸ್ಥಿತಿಯನ್ನು "ಇನ್ನಷ್ಟು ಉಲ್ಬಣಗೊಳಿಸುವ" ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವಾಂಗ್‌ಚುಕ್ ಆರೋಪಿಸಿದರು.