ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಸಚಿವ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಶುಕ್ರವಾರ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ಇತ್ತೀಚೆಗೆ ತೇಜ್ ಪ್ರತಾಪ್ ಯಾದವ್ ಅವರನ್ನು ಆರ್ ಜೆಡಿಯಿಂದ ಉಚ್ಚಾಟಿಸಿದ್ದರು.
ಇಂದು ಹೊಸ ಪಕ್ಷ ಘೋಷಿಸಿದ ತೇಜ್ ಪ್ರತಾಪ್, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 'ಜನಶಕ್ತಿ ಜನತಾದಳ', 'ಕಪ್ಪು ಹಲಗೆ'ಯನ್ನು ಚುನಾವಣಾ ಚಿಹ್ನೆಯಾಗಿಟ್ಟುಕೊಂಡು ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
"ನಾವು ಬಿಹಾರದ ಒಟ್ಟಾರೆ ಅಭಿವೃದ್ಧಿಗೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದೇವೆ ಮತ್ತು ಸಿದ್ಧರಿದ್ದೇವೆ. ಬಿಹಾರದಲ್ಲಿ ಸಂಪೂರ್ಣ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ. ಬಿಹಾರದ ಒಟ್ಟಾರೆ ಅಭಿವೃದ್ಧಿಗಾಗಿ ನಾವು ದೀರ್ಘ ಹೋರಾಟವನ್ನು ಮಾಡಲು ಸಿದ್ಧರಿದ್ದೇವೆ" ಎಂದು ತೇಜ್ ಪ್ರತಾಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚಿಗೆ ಐದು ಪಕ್ಷಗಳ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದ ತೇಜ್ ಪ್ರತಾಪ್ ಯಾದವ್ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಐದು ಸಣ್ಣ ಪಕ್ಷಗಳ ಮೈತ್ರಿಕೂಟ ರಚಿಸುವುದಾಗಿ ಹೇಳಿದ್ದರು. ಅಲ್ಲದೆ ತಾವು ಮಹುವಾ ಸ್ಥಾನದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರು.