ಶ್ರೀನಗರ: ಲಡಾಖ್ ಹಿಂಸಾಚಾರಕ್ಕೆ ಪರಿಸರ ಹೋರಾಟಗಾರ ಮತ್ತು ನಾವೀನ್ಯಕಾರ ಸೋನಮ್ ವಾಂಗ್‌ಚುಕ್ ಅವರ ಭಾಷಣ ಕಾರಣ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ ಮತ್ತು ಅವರ ಎನ್‌ಜಿಒದ ಎಫ್‌ಸಿಆರ್‌ಎ ಪರವಾನಗಿಯನ್ನು ರದ್ದುಗೊಳಿಸಿದೆ.
ಈ ಮಧ್ಯೆ ಸೋನಮ್ ವಾಂಗ್‌ಚುಕ್‌ಗೆ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರು ಬೆಂಬಲ ನೀಡಿದ್ದಾರೆ.
"ಇದು ತಪ್ಪು ಮತ್ತು ದೇಶದ ಜನರನ್ನು ಸತ್ಯದಿಂದ ದೂರವಿಡುವ ಉದ್ದೇಶ ಹೊಂದಿದೆ" ಎಂದು ಮೂರು ಬಾರಿ ಕಣಿವೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಮತ್ತು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಹೇಳಿದ್ದಾರೆ.
ವಾಂಗ್‌ಚುಕ್, ಮಹಾತ್ಮ ಗಾಂಧಿಯವರ ಅಹಿಂಸಾ ಮಾರ್ಗವನ್ನು ಎಂದೂ ಬಿಟ್ಟಿಲ್ಲ. "ಹಕ್ಕುಗಳ ನಿರಾಕರಣೆಯಿಂದ ಕೋಪಗೊಂಡ ಲೇಹ್‌ನ ಯುವಕರು ಹಿಂಸಾತ್ಮಕ ಮಾರ್ಗ ಅನುಸರಿಸಿದ್ದಾರೆ" ಎಂದು ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
"ಹಿಂಸಾಚಾರಕ್ಕೆ ವಾಂಗ್‌ಚುಕ್ ಅವರು ಜವಾಬ್ದಾರಿಯಲ್ಲ ಮತ್ತು ಅವರು ಅದರಲ್ಲಿ ಭಾಗಿಯಾಗಿಲ್ಲ. ಬಲಪ್ರಯೋಗ ಮಾಡಬೇಡಿ ಮತ್ತು ಲಡಾಖ್ ನಾಯಕರೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸಿ" ಎಂದು ಕೇಂದ್ರ ಸರ್ಕಾರಕ್ಕೆ ಅಬ್ದುಲ್ಲಾ ಮನವಿ ಮಾಡಿದ್ದಾರೆ.
ಈ ಪ್ರದೇಶದಲ್ಲಿ ವಿದೇಶಿ ಹಸ್ತಕ್ಷೇಪದ ಆರೋಪಗಳನ್ನು ನಿರಾಕರಿಸಿದ ಅಬ್ದುಲ್ಲಾ, ಲಡಾಖ್‌ಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿರುವುದೇ ಈ ಹತಾಶೆಗೆ ಕಾರಣ ಎಂದಿದ್ದಾರೆ.
"ಲಡಾಖ್ ಜನರ ಹತಾಶೆಗೆ ವಿದೇಶಿ ಹಸ್ತಕ್ಷೇಪ ಕಾರಣವಲ್ಲ. ಬದಲಾಗಿ ಕೇಂದ್ರ ಸರ್ಕಾರ ನೀಡಿದ ಭರವಸೆಗಳು ಈಡೇರಿಸದಿರುವುದು ಕಾರಣ. ರಾಜ್ಯದ ಸ್ಥಾನಮಾನದ ಬೇಡಿಕೆ ನ್ಯಾಯಸಮ್ಮತವಾಗಿದೆ ಮತ್ತು ಕೇಂದ್ರವು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಸ್ಯೆ ಪರಿಹರಿಸದಿದ್ದರೆ, ಈ ಅಸಮಾಧಾನವು ಕುದಿಯುತ್ತಲೇ ಇರುತ್ತದೆ ಮತ್ತು ಅಂತಿಮವಾಗಿ ಗಂಭೀರ ಪರಿಸ್ಥಿತಿಗೆ ಕಾರಣವಾಗಬಹುದು" ಎಂದಿದ್ದಾರೆ.
ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಸಹ ವಾಂಗ್‌ಚುಕ್ ಅವರನ್ನು ಬೆಂಬಲಿಸಿದ್ದು, "ಕೇಂದ್ರ ಗೃಹ ಸಚಿವಾಲಯವು ಸೋನಮ್ ವಾಂಗ್‌ಚುಕ್ ಅವರ FCRA ಪರವಾನಗಿಯನ್ನು ರದ್ದುಗೊಳಿಸಿರುವುದು ಸರಿಯಲ್ಲ, ಇದು ಶಿಕ್ಷೆಯ ವೇಷದಲ್ಲಿರುವ ಅವರ ಹತಾಶೆ" ಎಂದು ಮೆಹಬೂಬಾ X ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಅವರು (ವಾಂಗ್ಚುಕ್) ಸರ್ಕಾರದ ವಿರೋಧಿ ಅಥವಾ ರಾಷ್ಟ್ರ ವಿರೋಧಿ ಅಲ್ಲ. ಅವರು ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು, ವಿಶೇಷವಾಗಿ ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ ಭರವಸೆ ಈಡೇರಿಸುವಂತೆ ಕೇಳಿದ್ದಾರೆ. ಹೊಣೆಗಾರಿಕೆಯನ್ನು ಬಯಸುವುದು ಅಪರಾಧವಲ್ಲ” ಎಂದು ಮುಫ್ತಿ ಹೇಳಿದ್ದಾರೆ.