ಬರೇಲಿ: ಉತ್ತರ ಪ್ರದೇಶದ ಬರೇಲಿಯ ಮಸೀದಿ ಹೊರಗಡೆ ಪೊಲೀಸರು ಹಾಗೂ ಸ್ಥಳೀಯ ಮುಸ್ಲಿಮರ ನಡುವೆ ಶುಕ್ರವಾರ ಭಾರಿ ಘರ್ಷಣೆ ನಡೆದಿದೆ.
I Love Muhammad' ಪ್ರಚಾರಂದೋಲನಾ ಬೆಂಬಲಿಸಿ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆಯನ್ನು ಮುಂದೂಡುವುದಾಗಿ ಸ್ಥಳೀಯ ಧರ್ಮಗುರು ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್‌ನ ಮುಖ್ಯಸ್ಥ ಮೌಲಾನಾ ತೌಕೀರ್ ರಜಾ ಘೋಷಿಸುತ್ತಿದ್ದಂತೆಯೇ ಬರೇಲಿಯ ಮಸೀದಿಯ ಹೊರಗೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಗುಂಪು ಮತ್ತು ಪೊಲೀಸರ ನಡುವೆ ಘರ್ಷಣೆ ಭುಗಿಲೆದ್ದಿತ್ತು.
ಶುಕ್ರವಾರದ ಪ್ರಾರ್ಥನೆಯ ನಂತರ ಕೋಟ್ವಾಲಿ ಪ್ರದೇಶದಲ್ಲಿನ ಧರ್ಮಗುರುಗಳ ನಿವಾಸದ ಹೊರಗೆ ಮತ್ತು ಮಸೀದಿಯ ಬಳಿ I Love Muhammad'ಎಂದು ಬರೆಯಲಾದ ಪೋಸ್ಟರ್‌ಗಳನ್ನು ಹಿಡಿದ ಜನರು ಪ್ರತಿಭಟನೆ ಸ್ಥಗಿತದ ಸುದ್ದಿ ಕೇಳಿ ಆಕ್ರೋಶ ಭರಿತರಾದರು ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರತಿಭಟನೆಗೆ ಪೊಲೀಸ್ ಅಧಿಕಾರಿಗಳು ಅನುಮತಿ ನೀಡದೆ ಇದುದ್ದರಿಂದ ರಾಜಾ ಅವರು ಕೊನೆ ಕ್ಷಣದಲ್ಲಿ ಪ್ರತಿಭಟನೆ ಸ್ಥಗಿತದ ಘೋಷಣೆ ಮಾಡಿದರು ಎಂದು ಮೂಲಗಳು ತಿಳಿಸಿವೆ. ಏನೇ ಆಗಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಗುರುವಾರ ಹೇಳಿದ್ದರು.
ಮಸೀದಿಯ ಹೊರಗೆ ಜಮಾಯಿಸಿದ ಗುಂಪನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದಾಗ ಉದ್ರಿಕ್ತರಾದ ಪ್ರತಿಭಟನಾಕಾರರು ಕಲ್ಲು ತೂರಾಟ ಆರಂಭಿಸಿದ್ದಾರೆ. ಇದರಿಂದಾಗಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಡಿಐಜಿ ಅಜಯ್ ಕುಮಾರ್ ಸಾಹ್ನಿ, ಎಸ್‌ಎಸ್‌ಪಿ ಅನುರಾಗ್ ಆರ್ಯ ಮತ್ತು ಡಿಎಂ ಅವಿನಾಶ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಕೊತ್ವಾಲಿ ಪ್ರದೇಶಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯ ಮುಸ್ಲಿಂರು ಶಸ್ತ್ರ ಸಜ್ಜಿತರಾದ ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮ ಮತ್ತು ದೂರದರ್ಶನ ಸುದ್ದಿ ವಾಹಿನಿಗಳಲ್ಲಿನ ವೈರಲ್ ಆಗಿವೆ.