ಧಾರ್: ತಾಯಿ ಎದುರೇ 5 ವರ್ಷದ ಪುಟ್ಟ ಬಾಲಕನ ಶಿರಚ್ಛೇದ ಮಾಡಿರುವ ಭೀಕರ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಧಾರ್ ನಲ್ಲಿ ಈ ಘಟನೆ ನಡೆದಿದ್ದು, ದುರುಳನ ಅಟ್ಟಹಾಸಕ್ಕೆ ಬಲಿಯಾದ ಪುಟ್ಟ ಬಾಲಕನನ್ನು 5 ವರ್ಷದ ವಿಕಾಸ್ ಎಂದು ಗುರುತಿಸಲಾಗಿದೆ. ಬಾಲಕನ ಕೊಲೆಗೈದ ಆರೋಪಿಯನ್ನು 25 ವರ್ಷ ವಯಸ್ಸಿನ ಮಹೇಶ್ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಆರೋಪಿ ಮಹೇಶ್ ಸ್ಥಳೀಯ ನಿವಾಸಿ ಕಾಲುಸಿಂಗ್ ಎಂಬುವವರ ಮನೆ ಬಳಿ ಬೈಕ್ ನಲ್ಲಿ ಬಂದು ಏಕಾಏಕಿ ಮನೆಗೆ ನುಗ್ಗಿದ್ದಾನೆ. ಅಚ್ಚರಿ ಎಂದರೆ ಈ ಆರೋಪಿ ಮಹೇಶ್ ನನ್ನು ಕಾಲೂ ಸಿಂಗ್ ರ ಮನೆಯವರೂ ಎಂದಿಗೂ ನೋಡಿರಲಿಲ್ಲ. ಆತನ ಪರಿಚಯವೇ ಇವರಿಗೆ ಇರಲಿಲ್ಲ. ಅದಾಗ್ಯೂ ಆತ ಏಕೆ ಮನೆಯೊಳಗೆ ಬಂದಿದ್ದಾನೆ ಎಂದು ತಿಳಿಯದೇ ಕಾಂಗಾಲಾಗಿದ್ದಾರೆ.
ಈ ವೇಳೆ ನೋಡ ನೋಡುತ್ತಲೇ ಆರೋಪಿ ಮಹೇಶ್ ಮನೆಯಲ್ಲಿ ಬಿದ್ದಿದ್ದ ಹರಿತವಾದ ಗುದ್ದಲಿ ತೆಗೆದುಕೊಂಡು ಅಲ್ಲಿಯೇ ನಿಂತಿದ್ದ ಪುಟ್ಟ ಬಾಲಕ ವಿಕಾಸ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಏನಾಗುತ್ತಿದೆ ಎಂದು ಮನೆಯವರು ಅರಿತುಕೊಳ್ಳುವಷ್ಟರಲ್ಲೇ ಆರೋಪಿ ಮಹೇಶ್ ಗುದ್ದಲಿಯಿಂದ ಪುಟ್ಟ ಬಾಲಕನ ಶಿರಚ್ಛೇದ ಮಾಡಿದ್ದಾನೆ.
ಬಳಿಕ ಆತನ ಭುಜಕ್ಕೆ ಬಾರಿಸಿದ್ದಾನೆ. ಇದರಿಂದ 5 ವರ್ಷದ ಪುಟ್ಟ ಬಾಲಕ ವಿಕಾಸ್ ಇಡೀ ದೇಹ ಛಿದ್ರಗೊಂಡಿದೆ. ಈ ವೇಳೆ ಅಲ್ಲಿಯೇ ಇದ್ದ ವಿಕಾಸ್ ತಾಯಿ ಆಘಾತಕ್ಕೊಳಗಾಗಿದ್ದಾರೆ. ಮಗುವಿನ ಮೇಲೆ ಹಲ್ಲೆ ತಡೆಯಲು ಬಂದ ಪೋಷಕರ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ
ಮಗುವನ್ನು ಉಳಿಸಲು ಹತಾಶವಾಗಿ ಪ್ರಯತ್ನಿಸಿದ ತಾಯಿಗೂ ಕೂಡ ತೀವ್ರ ಗಾಯಗಳಾಗಿವೆ. ಆಕೆ ತೀವ್ರ ಆಘಾತಕ್ಕೊಳಗಾದ ಸ್ಥಿತಿಯಲ್ಲಿದ್ದರು. ಸುತ್ತಮುತ್ತಲ ಪ್ರದೇಶದಾದ್ಯಂತ ಕೇಳಿದ್ದು, ಕೂಡಲೇ ಸ್ಥಳಕ್ಕೆ ದಾವಿಸಿದ ಸ್ಥಳೀಯರು ಕಾಲೂ ಸಿಂಗ್ ಮನೆಯಲ್ಲಿ ನಡೆದ ಭೀಕರತೆಯನ್ನು ನೋಡಿ ಕೋಪದಿಂದ ಆರೋಪಿ ಮಹೇಶ್ ನನ್ನು ಸೆರೆಹಿಡಿದು ಮನಸೋ ಇಚ್ಛೆ ಥಳಿಸಿದ್ದಾರೆ.
ಬಳಿಕ ಪೊಲೀಸರು ಬಂದಿದ್ದು ತೀವ್ರವಾಗಿ ಗಾಯಗೊಂಡಿದ್ದ ಆರೋಪಿ ಮಹೇಶ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರವಾಗಿ ಗಾಯಗೊಂಡಿದ್ದ ಆರೋಪಿ ಮಹೇಶ್ ಮಾರ್ಗಮಧ್ಯಯೇ ಸಾವನ್ನಪ್ಪಿದ್ದಾನೆ.
ಈ ಘಟನೆಯನ್ನು "ಅತ್ಯಂತ ಹೃದಯವಿದ್ರಾವಕ" ಎಂದು ಕರೆದ ಧಾರ್ ಪೊಲೀಸ್ ವರಿಷ್ಠಾಧಿಕಾರಿ ಮಾಯಾಂಕ್ ಅವಸ್ಥಿ, ಆರೋಪಿಯು ಗುಂಪೊಂದು ಥಳಿಸಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದರು. "ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಜವಾದ ಕಾರಣ ದೃಢಪಡಲಿದೆ. ಪ್ರಾಥಮಿಕ ತನಿಖೆಗಳು ಅವರು ಮಾನಸಿಕವಾಗಿ ಅಸ್ಥಿರರಾಗಿದ್ದರು ಎಂದು ಸೂಚಿಸುತ್ತವೆ" ಎಂದು ಅವಸ್ಥಿ ಹೇಳಿದ್ದಾರೆ.
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಮಾನಸಿಕ ಅಸ್ವಸ್ಥ
ಮಹೇಶ್ ಅಲಿರಾಜ್‌ಪುರ ಜಿಲ್ಲೆಯ ಜೋಬತ್ ಬಾಗ್ಡಿ ನಿವಾಸಿ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರು ಮಾನಸಿಕವಾಗಿ ಅಸ್ಥಿರರಾಗಿದ್ದರು ಮತ್ತು ಕಳೆದ ಮೂರ್ನಾಲ್ಕು ದಿನಗಳಿಂದ ಮನೆಯಿಂದ ಕಾಣೆಯಾಗಿದ್ದರು ಎಂದು ಅವರ ಕುಟುಂಬ ಪೊಲೀಸರಿಗೆ ತಿಳಿಸಿದೆ. ಭೀಕರ ಹತ್ಯೆಗೆ ಕೇವಲ ಒಂದು ಗಂಟೆ ಮೊದಲು, ಅವರು ಹತ್ತಿರದ ಅಂಗಡಿಯಿಂದ ವಸ್ತುಗಳನ್ನು ಕದಿಯಲು ಪ್ರಯತ್ನಿಸಿದ್ದ ಎಂದೂ ಹೇಳಲಾಗಿದೆ.