ಕುರುಕ್ಷೇತ್ರ: ಹರಿಯಾಣದ ಕುರುಕ್ಷೇತ್ರದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಕೈತಾಲ್-ಕುರುಕ್ಷೇತ್ರ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಘರಾರ್ಸಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ನಂಬಲಾಗಿದೆ ಎಂದು ಆದರ್ಶ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್(SHO) ದಿನೇಶ್ ಸಿಂಗ್ ಅವರು ಹೇಳಿದ್ದಾರೆ.
"ಘರ್ಷಣೆ ಎಷ್ಟು ತೀವ್ರವಾಗಿತ್ತೆಂದರೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಒಳಗೆ ಸಿಲುಕಿದ್ದವರನ್ನು ರಕ್ಷಿಸಲು ಸ್ಥಳೀಯರು ಕಾರಿನ ಬಾಗಿಲುಗಳನ್ನು ಕತ್ತರಿಸಬೇಕಾಯಿತು" ಎಂದು ಸಿಂಗ್ ತಿಳಿಸಿದ್ದಾರೆ.
ಅಂಬಾಲಾದ ಬುಬ್ಕಾ ಗ್ರಾಮದ ಆರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕಾರಿನಲ್ಲಿದ್ದ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರು.
ಮೃತರನ್ನು, ಪ್ರವೀಣ್, ಪವನ್ ಮತ್ತು ಅವರ ಪತ್ನಿ ಉರ್ಮಿಳಾ, ರಾಜೇಂದ್ರ ಹಾಗೂ ಸುಮನ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಪ್ರಯಾಣಿಕ, 18 ವರ್ಷದ ವಂಶಿಕಾ ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಕೂಡ ಗಾಯಗೊಂಡಿದ್ದಾರೆ.