ಬರೇಲಿ: 'ಐ ಲವ್ ಜಿಹಾದ್' ವಿವಾದದ ನಡುವೆ ಉತ್ತರ ಪ್ರದೇಶದ ಬರೇಲಿಯಲ್ಲಿ ಸೆಪ್ಟೆಂಬರ್ 26 ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಮತ್ತೋರ್ವ ಮುಸ್ಲಿಂ ಧರ್ಮಗುರು ಮೌಲಾನಾ ಮೊಹ್ಸಿನ್ ರಜಾ ಎಂಬುವರನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ನಂತರ ಬರೇಲಿಯ ಕೊತ್ವಾಲಿ ಪ್ರದೇಶದ ಮಸೀದಿ ಹಾಗೂ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಕೀರ್ ರಝಾ ಖಾನ್ ಮನೆಯ ಹೊರಗಡೆ 'ಐ ಲವ್ ಮುಹಮ್ಮದ್' ಪೋಸ್ಟರ್‌ಗಳನ್ನು ಹಿಡಿದ ಜನರ ಗುಂಪು ಪೊಲೀಸರೊಂದಿಗೆ ಘರ್ಷಣೆ ನಡೆಸಿತು. ಜಾಥಾಕ್ಕೆ ಅಧಿಕಾರಿಗಳು ಅನುಮತಿ ನಿರಾಕರಿಸಿದ ಕಾರಣ ರಾಝಾ ಕೊನೆಯ ಕ್ಷಣದಲ್ಲಿ ಪ್ರತಿಭಟನೆ ರದ್ದುಗೊಳಿಸಿದ್ದಕ್ಕಾಗಿ ಮುಸ್ಲಿಂರು ಆಕ್ರೋಶಗೊಂಡಿದ್ದರು ಎನ್ನಲಾಗಿದೆ.
ಕಲ್ಲು ತೂರಾಟ ಪ್ರಕರಣದಲ್ಲಿ ಪ್ರಮುಖ ಸಂಚುಕೋರನಾಗಿರುವ ಮೌಲಾನಾ ತೌಕೀರ್ ರಜಾನ ಹಲವು ಸಹಚರರನ್ನು ಬಂಧಿಸಲಾಗಿದೆ ಎಂದು ಬರೇಲಿ ರೇಂಜ್ ಉಪ ಪೊಲೀಸ್ ಮಹಾನಿರೀಕ್ಷಕ ಅಜಯ್ ಕುಮಾರ್ ಸಾಹ್ನಿ ತಿಳಿಸಿದ್ದಾರೆ.
"ಮೌಲಾನಾ ತೌಕೀರ್ ಜೊತೆಗೆ ಅವರ ಅನೇಕ ಸಹಚರರನ್ನು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಜೈಲಿಗೆ ಹಾಕಲಾಗಿದೆ. ಬಂಗಾಳ ಮತ್ತು ಬಿಹಾರದ ಜನರನ್ನು ಸಹ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇದು ದಿಢೀರ್ ನಡೆದ ಪ್ರತಿಭಟನೆಯಲ್ಲ. ಪೂರ್ವ ನಿಯೋಜಿತ ಸಂಚು ಎಂಬುದು ದೃಢಪಟ್ಟಿದೆ. ಪೋಸ್ಟರ್, ಬ್ಯಾನರ್ ಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ ಎಂದು ಡಿಐಜಿ ಸಾಹ್ನಿ ಸುದ್ದಿಸಂಸ್ಥೆ ANI ಗೆ ತಿಳಿಸಿದ್ದಾರೆ.
ಮೊಹ್ಸಿನ್ ರಜಾ ಅವರ ಬಂಧನದ ನಂತರ ಆತನ ಆಸ್ತಿಯನ್ನು ಸ್ಥಳೀಯ ಆಡಳಿತ ವಶಕ್ಕೆ ಪಡೆದಿದೆ. ಮೊಹ್ಸಿನ್ ಮೌಲಾನಾ, ತೌಕೀರ್ ರಝಾ ಜೊತೆ ಸಂಪರ್ಕ ಹೊಂದಿರುವುದಾಗಿ ತಿಳಿದುಬಂದಿದೆ. ತೌಕೀರ್ ರಝಾ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮಂಗಳವಾರವೂ ಬರೇಲಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸೆಪ್ಟೆಂಬರ್ 26 ರಂದು "ಐ ಲವ್ ಮುಹಮ್ಮದ್" ಜಾಥಾ ವಿವಾದ ಹಿಂಸಾಚಾರಕ್ಕೆ ತಿರುಗಿದಾಗಿನಿಂದ ನಗರವು ಉದ್ವಿಗ್ನವಾಗಿದೆ.