ಲಖನೌ: ಲಖನೌನ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಿಂದ ಸೋಮವಾರ ರಾತ್ರಿ, ಬ್ಯಾಂಕಾಕ್‌ಗೆ ತೆರಳುತ್ತಿದ್ದ ಏರ್‌ಏಷ್ಯಾ ವಿಮಾನ FD 147, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತಕ್ಷಣ ಲಖನೌಗೆ ವಾಪಸ್ ಬಂದು ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, 132 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತ ವಿಮಾನವು ರಾತ್ರಿ 10:50 ಕ್ಕೆ ಟೇಕ್ ಆಫ್ ಆಯಿತು. ಆದರೆ ಆಕಾಶದಲ್ಲಿದ್ದಾಗ ಹೈಡ್ರಾಲಿಕ್ ವೈಫಲ್ಯ ಕಾಣಿಸಿಕೊಂಡಿದೆ.
ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ಪೈಲಟ್‌ಗಳು ಲಖನೌನ ವಾಯುಪ್ರದೇಶದಲ್ಲಿ 21 ನಿಮಿಷಗಳ ಕಾಲ ಸುತ್ತುವರೆದು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.
ನಂತರ ಹಾರಾಟವನ್ನು ರದ್ದುಗೊಳಿಸಲಾಯಿತು ಮತ್ತು ವಿಮಾನವನ್ನು ತಪಾಸಣೆ, ದುರಸ್ತಿಗಾಗಿ ಎಂಜಿನಿಯರ್‌ಗಳಿಗೆ ಹಸ್ತಾಂತರಿಸಲಾಯಿತು.
ಕೆಲವು ಪ್ರಯಾಣಿಕರು ಮರುಪಾವತಿಯನ್ನು ಆರಿಸಿಕೊಂಡರೂ. ಇತರರನ್ನು ಹತ್ತಿರದ ಹೋಟೆಲ್‌ನಲ್ಲಿ ಇರಿಸಲಾಯಿತು. ಅಗತ್ಯವಿರುವ ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ ಮತ್ತು ಪ್ರಯಾಣಿಕರ ಯೋಗಕ್ಷೇಮ ಪ್ರಮುಖ ಆದ್ಯತೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ಭರವಸೆ ನೀಡಿದೆ.