ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ನಡೆದ ಟಿವಿಕೆ ಪಕ್ಷದ ರ‍್ಯಾಲಿಯ ವೇಳೆ 41 ಮಂದಿಯನ್ನು ಬಲಿತೆಗೆದುಕೊಂಡ ಕಾಲ್ತುಳಿತ ಘಟನೆಯ ನಂತರ, ಪಕ್ಷದ ಸಂಸ್ಥಾಪಕ, ನಟ ವಿಜಯ್ ಮಂಗಳವಾರ, ತಮ್ಮ ಉಪಸ್ಥಿತಿಯು ಮತ್ತೆ ಅಲ್ಲಿ 'ಅಸಾಮಾನ್ಯ ಪರಿಸ್ಥಿತಿಗೆ' ಕಾರಣವಾಗಬಹುದು ಎಂದು ಸಂತ್ರಸ್ತರನ್ನು ಭೇಟಿ ಮಾಡಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಸವಾಲು ಹಾಕಿದ ವಿಜಯ್, ತನಗೆ ಏನು ಬೇಕಾದರೂ ಮಾಡಿ. ಆದರೆ, ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ಅಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ ಮತ್ತು ಮಾರಕ ಘಟನೆಯ ಹಿಂದಿನ ಸತ್ಯ ಇನ್ನೇನು ಕೆಲವು ದಿನಗಳಲ್ಲಿ ಹೊರಬರುತ್ತದೆ. ತಮ್ಮ ಜೀವನದಲ್ಲಿ ಇಂತಹ ನೋವಿನ ಪರಿಸ್ಥಿತಿಯನ್ನು ಎಂದಿಗೂ ಎದುರಿಸಿಲ್ಲ ಎಂದರು.
'ಘಟನೆಯ ನಂತರ ನಾನು ಮತ್ತೆ ಕರೂರಿಗೆ ಭೇಟಿ ನೀಡಲಿಲ್ಲ ಏಕೆಂದರೆ ಅದು ಅಸಾಮಾನ್ಯ ಪರಿಸ್ಥಿತಿಗೆ ಕಾರಣವಾಗುತ್ತದೆ. ನಾನು ಶೀಘ್ರದಲ್ಲೇ ನಿಮ್ಮನ್ನು (ಸಂತ್ರಸ್ತರ ಕುಟುಂಬಗಳು, ಗಾಯಗೊಂಡವರು) ಭೇಟಿಯಾಗುತ್ತೇನೆ' ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಕರೂರಿಗೆ ಭೇಟಿ ನೀಡದಿದ್ದಕ್ಕಾಗಿ ಮತ್ತು ಸಂತ್ರಸ್ತರ ಕುಟುಂಬಗಳು ಮತ್ತು ಗಾಯಾಳುಗಳನ್ನು ಭೇಟಿ ಮಾಡದಿದ್ದಕ್ಕಾಗಿ ವಿವಿಧ ವಲಯಗಳಿಂದ ಟೀಕೆ ವ್ಯಕ್ತವಾದ ನಂತರ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ಮಾರಕ ಘಟನೆಯ ಬಗ್ಗೆ ಶೀಘ್ರದಲ್ಲೇ ಸತ್ಯ ಹೊರಬರಲಿದೆ ಮತ್ತು ಯಾವುದೇ ಕ್ರಮ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಸುಳಿವು ನೀಡಿದರು.
ಸೆಪ್ಟೆಂಬರ್ 27 ರಂದು ತಮಿಳುನಾಡಿನ ಪಶ್ಚಿಮ ಕರೂರ್ ಜಿಲ್ಲೆಯಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಹಿರಿಯ ನಾಯಕರಾದ ಬುಸ್ಸಿ ಎನ್ ಆನಂದ್ ಮತ್ತು ಸಿಟಿಆರ್ ನಿರ್ಮಲ್ ಕುಮಾರ್ ಸೇರಿದಂತೆ ಅವರ ಪಕ್ಷದ ಸಹೋದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಮುಖ್ಯಮಂತ್ರಿ ಸರ್, ನಿಮಗೆ ಸೇಡು ತೀರಿಸಿಕೊಳ್ಳುವ ಆಲೋಚನೆ ಇದ್ದರೆ, ನೀವು ನನಗೆ ಏನು ಬೇಕಾದರೂ ಮಾಡಬಹುದು ಮತ್ತು ಪಕ್ಷದ ಕಾರ್ಯಕರ್ತರನ್ನು ಮುಟ್ಟಬಾರದು' ಎಂದು ಹೇಳಿದರು.
ಘಟನೆಯ ದಿನ, ಜನರ ಸುರಕ್ಷತೆಯನ್ನು ಪರಿಗಣಿಸಿ ಅವರು ಕರೂರಿನಿಂದ ಆತುರದಿಂದ ಹೊರಟೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ರಾಜಕೀಯ ಪ್ರಯಾಣವು ಹೊಸ ಹುರುಪಿನಿಂದ ಮುಂದುವರಿಯುತ್ತದೆ' ಎಂದು ತಿಳಿಸಿದರು.