ನವದೆಹಲಿ: ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ವದಂತಿಗಳನ್ನು ಹರಡದಿರಿ ಎಂದು ಪ್ರತಿಪಕ್ಷಗಳಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಲಿಮಿಟೇಶನ್ ಹೆಸರಿನಲ್ಲಿ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಬೇಡಿ. ದಕ್ಷಿಣ ಭಾರತದ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಬೇಡಿ. ಮಸೂದೆಯ ಉದ್ದೇಶವನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಪ್ರತಿಪಕ್ಷಗಳಿಗೆ ಕರೆ ನೀಡಿದರು.
ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ಒದಗಿಸುವ ಮಹತ್ವದ ನಿರ್ಧಾರ ಐತಿಹಾಸಿಕ ಹೆಜ್ಜೆಯಾಗಿದ್ದು, ಈ ಮಸೂದೆ ಭಾರತದ ಸಂಸತ್ತಿನ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿದೆ. ಎಲ್ಲಾ ಪಕ್ಷಗಳೂ ಇದಕ್ಕೆ ಬೆಂಬಲ ನೀಡುತ್ತವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂವಿಧಾನ ತಿದ್ದುಪಡಿ ಮಸೂದೆ 2011ರ ಜನಗಣತಿಯ ಆಧಾರದ ಮೇಲೆ ನಡೆಯುವ ಡಿಲಿಮಿಟೇಶನ್ ಪ್ರಕ್ರಿಯೆಗೆ ಸಂಬಂಧಿಸಿದೆ. ಇದರಡಿ ಕ್ಷೇತ್ರಗಳ ಗಡಿ ಬದಲಾವಣೆ ಹಾಗೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸಂಯೋಜನೆಯಲ್ಲಿ ಬದಲಾವಣೆ ಸಂಭವಿಸಲಿದೆ. ಆದರೆ ಪ್ರತಿಪಕ್ಷಗಳು ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿಶೇಷವಾಗಿ ನಾರಿ ಶಕ್ತಿ ವಂದನ್ ಅಧಿನಿಯಮ್ ಜಾರಿಗೆ ಸಂಬಂಧಿಸಿದ ತಿದ್ದುಪಡಿ ಮಸೂದೆಗಳ ಸಮಯದ ಬಗ್ಗೆ ಪ್ರಶ್ನೆ ಎತ್ತಿವೆ.
ಕೇಂದ್ರ ಸರ್ಕಾರದ ಪ್ರಕಾರ, 2029ರ ಸಾಮಾನ್ಯ ಚುನಾವಣೆಗೆ ಮುನ್ನ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 2027ರ ಜನಗಣತಿಯಿಂದ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ ನಡೆಸುವಂತೆ ಸಂವಿಧಾನ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಇದಲ್ಲದೆ, ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಪ್ರಸ್ತುತ 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಇದೆ.
ಇದರಲ್ಲಿ 815 ಸ್ಥಾನಗಳನ್ನು ರಾಜ್ಯಗಳಿಗೆ ಹಾಗೂ 35 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿಡುವ ಚಿಂತನೆಯೂ ಇದೆ ಎಂದು ತಿಳಿದುಬಂದಿದೆ. ಈ ಮಹತ್ವದ ವಿಷಯಗಳ ಚರ್ಚೆಗಾಗಿ ಏಪ್ರಿಲ್ 16ರಿಂದ 18ರವರೆಗೆ ವಿಶೇಷ ಸಂಸತ್ ಅಧಿವೇಶನವನ್ನು ಕೇಂದ್ರ ಸರ್ಕಾರ ಕರೆದಿದೆ.