ನವದೆಹಲಿ: ಲೋಕಸಭೆಯಲ್ಲಿಂದು ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡನೆ ಮಸೂದೆ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರನ್ನು "ಜಾದೂಗಾರ" ಎಂದು ಕರೆದಿರುವುದು ಆಡಳಿತ ಪಕ್ಷದ ಸದಸ್ಯರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ಮಾತನಾಡುವಾಗ ಆಪರೇಷನ್ ಸಿಂಧೂರವನ್ನು ಎಳೆದು ತಂದ ರಾಹುಲ್ ಗಾಂಧಿ, ಬಾಲಾಕೋಟ್, ಡಿಮಾನಿಟೇಜಷನ್, ಆಪರೇಷನ್ ಸಿಂಧೂರದ ಜಾದೂಗಾರ ಇದ್ದಕ್ಕಿದ್ದಂತೆ ಸಿಕ್ಕಿಬಿದ್ದಿದ್ದಾರೆ.
ಜಾದೂಗಾರ ಮತ್ತು ಉದ್ಯಮಿಗಳ ನಡುವೆ ಪಾಲುದಾರಿಕೆ ಇದೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಜಾದೂಗಾರ. ದುರ್ಬಲ ಮತ್ತು ನಿಶಕ್ತ ಪ್ರಧಾನಿ ಎಂದು ಟೀಕಿಸಿದ್ದಾರೆ.
ಬಿಜೆಪಿಯ ಜನರ ಮನಸ್ಸಿನಲ್ಲಿ ಒಂದು ಪ್ರಮುಖ ಗೊಂದಲವಿದೆ. ನೀವು ಭಾರತದ ಜನರಲ್ಲ ಅಥವಾ ಸಶಸ್ತ್ರ ಪಡೆಗಳಲ್ಲ. ಸಶಸ್ತ್ರ ಪಡೆಗಳು ಮತ್ತು ಭಾರತದ ಜನರ ಹಿಂದೆ ಹೇಡಿಗಳಂತೆ ಅಡಗಿಕೊಳ್ಳುವುದನ್ನು ನಿಲ್ಲಿಸಿ ಎಂದಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದು, ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ರಾಹುಲ್ ಗಾಂಧಿ ನಮ್ಮ ಯೋಧರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನನಗೂ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನೆಯಲ್ಲಿ ಪತ್ನಿಯ ಚಿಂತೆ ಇಲ್ಲ. ಹೀಗಾಗಿ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ನಾವಿಬ್ಬರೂ ನಿರಾಂತಕವಾಗಿ ಮಾತನಾಡಬಹುದು ಎಂದು ಹೇಳಿದ ರಾಹುಲ್ ಗಾಂಧಿ, ನನ್ನ 20 ವರ್ಷದ ರಾಜಕೀಯ ಜೀವನದಲ್ಲಿ ಮಾಡಲಾಗದ್ದನ್ನು ನನ್ನ ತಂಗಿ ಪ್ರಿಯಾಂಕಾ ಗಾಂಧಿ ಕೇವಲ 5 ನಿಮಿಷದಲ್ಲಿ ಮಾಡಿದ್ದು, ಅಮಿತ್ ಶಾ ಮುಖದಲ್ಲಿಯೂ ನಗೆ ಬರುವಂತೆ ಮಾಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.