ಕಾಲಿಂಪಾಂಗ್: ಮಮತಾ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕದಿದ್ದರೆ, ರಾಜ್ “ಬಾಂಗ್ಲಾದೇಶಿ ಮುಸ್ಲಿಮರು” ಎಂದು ಕರೆಯುವವರ ಕೈಗೆ ಹೋಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ ಶನಿವಾರ ಹೇಳಿದ್ದಾರೆ.
ಕಾಲಿಂಪಾಂಗ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಹಿಮಂತ, ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಸಂಪನ್ಮೂಲಗಳನ್ನು “ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರಿಗೆ” ಮೀಸಲಿಟ್ಟಿದ್ದಾರೆ ಎಂದು ಆರೋಪಿಸಿದರು.
“ಮಮತಾ ಬ್ಯಾನರ್ಜಿ ಬಂಗಾಳದ ಸಂಪೂರ್ಣ ಖಜಾನೆಯನ್ನು ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರಿಗೆ ಮೀಸಲಿಟ್ಟಿದ್ದಾರೆ. ಅವರು ಈ ಭೂಮಿಯನ್ನು ಮತಗಳಿಗಾಗಿ ಬಾಂಗ್ಲಾದೇಶಿ ಮುಸ್ಲಿಮರಿಗೆ ಮಾರಿಬಿಟ್ಟಿದ್ದಾರೆ,” ಎಂದು ಅಸ್ಸಾಂ ಮುಖ್ಯಮಂತ್ರಿ ಆರೋಪಿಸಿದರು. “ನಾವು ಮಮತಾ ಬ್ಯಾನರ್ಜಿ ಅವರನ್ನು ಬಂಗಾಳದ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲೇಬೇಕು, ಇಲ್ಲದಿದ್ದರೆ ಒಂದು ದಿನ ಬಾಂಗ್ಲಾದೇಶಿ ಮುಸ್ಲಿಮರು ಈ ರಾಜ್ಯವನ್ನು ನಮ್ಮ ಕೈಯಿಂದ ಕಸಿದುಕೊಳ್ಳುತ್ತಾರೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ “ಬಾಂಗ್ಲಾದೇಶಿ ನುಸುಳುಕೋರರನ್ನು” ಹೊರಹಾಕುವುದಾಗಿ ಹಿಮಂತ ಭರವಸೆ ನೀಡಿದರು. ಅಸ್ಸಾಂ ಮತ್ತು ತ್ರಿಪುರಾದಲ್ಲಿನ ತಮ್ಮ ಪಕ್ಷದ ಸರ್ಕಾರಗಳು “ಬಾಂಗ್ಲಾದೇಶಿ ಮುಸ್ಲಿಮರು” ಭಾರತಕ್ಕೆ ನುಗ್ಗುವುದನ್ನು ತಡೆಯಲು ಕ್ರಮ ಕೈಗೊಂಡಿವೆ ಎಂದು ಅವರು ಒತ್ತಿ ಹೇಳಿದರು.
ಈಗಾಗಲೇ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಅಸ್ಸಾಂ ಮುಖ್ಯಮಂತ್ರಿ ವಿರುದ್ಧ, ಮಮತಾ ಬ್ಯಾನರ್ಜಿ ಕುರಿತು ‘ಸಾಮುದಾಯಿಕ ಉದ್ವೇಗ ಹುಟ್ಟಿಸುವ, ಪ್ರಚೋದನಾತ್ಮಕ ಮತ್ತು ವಿಭಜನೆಯ’ ಹೇಳಿಕೆಗಳನ್ನು ನೀಡಿದರೆಂದು ಆರೋಪಿಸಿ, ಭಾರತದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಆ ದೂರು ಕುರಿತು ಪ್ರತಿಕ್ರಿಯಿಸಿದ ಹಿಮಂತ ಬಿಸ್ವ ಶರ್ಮಾ, ಇಂತಹ ಕ್ರಮಗಳು ತಮಗೆ ಭಯ ಹುಟ್ಟಿಸುವುದಿಲ್ಲ ಎಂದು ಹೇಳಿದರು.
ಬಿಜೆಪಿ ನಾಯಕರು, ಮಾಜಿ ಟಿಎಂಸಿ ಶಾಸಕರಾಗಿದ್ದ ಹಾಗೂ ಆಮ್ ಜನತಾ ಉನ್ನಯನ್ ಪಾರ್ಟಿ (ಎಜೆಯುಪಿ) ಸ್ಥಾಪಕರಾದ ಹ್ಯೂಮಾಯೂನ್ ಕಬೀರ್ ಅವರು ಬಂಗಾಳದಲ್ಲಿ ಧ್ವಂಸಗೊಂಡ ಬಾಬ್ರಿ ಮಸೀದಿಯ ಪ್ರತಿರೂಪವನ್ನು ನಿರ್ಮಿಸಲು ಯತ್ನಿಸಿದ್ದರೆಂದು ಉಲ್ಲೇಖಿಸಿ, ಅಸ್ಸಾಂನಲ್ಲಿ ಇಂತಹ ಪ್ರಯತ್ನ ನಡೆದಿದ್ದರೆ ತಾವು ಕಠಿಣ ಕ್ರಮ ಕೈಗೊಂಡು, ಸಂಬಂಧಿತ ವ್ಯಕ್ತಿಯನ್ನು ಜೈಲಿಗೆ ಕಳುಹಿಸುತ್ತಿದ್ದೆ ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ, ಹ್ಯೂಮಾಯೂನ್ ಕಬೀರ್ ಅವರಿಗೂ ಬಿಜೆಪಿ ಹಾಗೂ ಅದರ ಉನ್ನತ ನಾಯಕರಾದ ಹಿಮಂತ ಸೇರಿದಂತೆ ಇತರರೊಂದಿಗೆ ಸಂಪರ್ಕವಿದೆ ಎಂಬ ಆರೋಪಗಳು ಹೊರಬಿದ್ದ ಹಿನ್ನೆಲೆಯಲ್ಲಿ, ಟಿಎಂಸಿ ತನಿಖೆ ನಡೆಸುವಂತೆ ಆಗ್ರಹಿಸಿದೆ. ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ಶಂಕಿತ ವಿಡಿಯೋದಲ್ಲಿ, ಕಬೀರ್ ಅವರು ಹಿಮಂತ, ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಹಾಗೂ ಪ್ರಧಾನ ಮಂತ್ರಿ ಕಚೇರಿಯೊಂದಿಗೆ ತಮಗೆ ಆಪ್ತ ಸಂಬಂಧವಿದೆ ಎಂದು ಹೇಳಿರುವುದು ಕೇಳಿಬಂದಿದ್ದು, ಅಲ್ಪಸಂಖ್ಯಾತರ ಮತಗಳನ್ನು ಬೇರೆಡೆ ತಿರುಗಿಸಿ ಮಮತಾಳನ್ನು ಚುನಾವಣೆಯಲ್ಲಿ ಸೋಲಿಸಲು ಬಹು ಕೋಟಿ ರೂಪಾಯಿಗಳ ಸಂಚು ರೂಪಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.