ನಾಸಾ ಏಪ್ರಿಲ್ 13, ಸೋಮವಾರದಂದು ಉಪಗ್ರಹ ಚಿತ್ರಗಳ ಆಧಾರದ ಮೇಲೆ ಸಿದ್ಧಪಡಿಸಿದ ಹೊಸ ಜಾಗತಿಕ ನಕ್ಷೆಯನ್ನು ಬಿಡುಗಡೆ ಮಾಡಿದೆ.
ಈ ನಕ್ಷೆಯಲ್ಲಿ 2014ರಿಂದ 2022ರವರೆಗೆ ಭೂಮಿಯ ರಾತ್ರಿ ಬೆಳಕಿನಲ್ಲಿ ಸಂಭವಿಸಿದ ಬದಲಾವಣೆಗಳನ್ನು ತೋರಿಸಲಾಗಿದೆ.ವಿಜ್ಞಾನಿಗಳು ಒಂಬತ್ತು ವರ್ಷಗಳ ಕಾಲ ಪ್ರತಿರಾತ್ರಿ ಸಂಗ್ರಹಿಸಿದ 16 ಲಕ್ಷಕ್ಕೂ ಹೆಚ್ಚು ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಿ ಭೂಮಿಯ ರೂಪುರೇಷೆಯನ್ನು ನಿರ್ಮಿಸಿದ್ದಾರೆ. ಅಧ್ಯಯನದ ಫಲಿತಾಂಶಗಳು, ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ನಡೆದ ನಗರೀಕರಣದ ಪರಿಣಾಮವಾಗಿ, ಉತ್ತರ ಭಾರತದ ರಾತ್ರಿ ಬೆಳಕಿನ ಮಟ್ಟಗಳು ಹೆಚ್ಚಿರುವುದನ್ನು ಬಹಿರಂಗಪಡಿಸಿವೆ.
ಕನೆಕ್ಟಿಕಟ್ ವಿಶ್ವವಿದ್ಯಾಲಯದ ತಿಯನ್ ಲಿ ಮತ್ತು ಝೆ ಝು ಅವರ ನೇತೃತ್ವದ ತಂಡ, ವಿಸಿಬಲ್ ಇನ್ಫ್ರಾರೆಡ್ ಇಮೇಜಿಂಗ್ ರೇಡಿಯೋಮೀಟರ್ ಸೂಟ್ (VIIRS) ಉಪಕರಣದಿಂದ ಸೆರೆಹಿಡಿದ ಚಿತ್ರಗಳನ್ನು ವಿಶ್ಲೇಷಿಸಲು ಹೊಸ ಅಲ್ಗೋರಿದಮ್ ನ್ನು ಬಳಸಿದೆ. ನಕ್ಷೆಯಲ್ಲಿ ಬಂಗಾರದ ಬಣ್ಣದ ಪ್ರದೇಶಗಳು ಹೆಚ್ಚು ಪ್ರಕಾಶಮಾನವಾದ ರಾತ್ರಿ ಬೆಳಕನ್ನು ಸೂಚಿಸುತ್ತವೆ, (ನೇರಳೆ) ಬಣ್ಣದ ಪ್ರದೇಶಗಳು ಹೋಲಿಕೆಯಾಗಿ ಕಡಿಮೆ ಬೆಳಕನ್ನು ತೋರಿಸುತ್ತವೆ.
ಭಾರತ, ಚೀನಾ, ಮಧ್ಯಪ್ರಾಚ್ಯ ಮತ್ತು ಮಧ್ಯ ಅಮೆರಿಕಾದ ಬಹುಭಾಗ ಬಂಗಾರದ ಬಣ್ಣದಲ್ಲಿ ಕಾಣಿಸಿಕೊಂಡರೆ, ಅಮೆರಿಕಾದ ಪಶ್ಚಿಮ ಭಾಗದಲ್ಲಿ ಬಂಗಾರದ ಪ್ರದೇಶಗಳು ಹೆಚ್ಚಾಗಿ, ಪೂರ್ವ ಭಾಗದಲ್ಲಿ ನೇರಳೆ ಮತ್ತು ಬಿಳಿ ಬಣ್ಣಗಳು ಹೆಚ್ಚು ಗೋಚರಿಸುತ್ತವೆ. ಇತ್ತ ಯುರೋಪಿನ ಬಹುಭಾಗ ನೇರಳೆ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಈ ಅವಧಿಯಲ್ಲಿ ಆ ಪ್ರದೇಶದಲ್ಲಿ ರಾತ್ರಿ ಬೆಳಕು ಕುಂಠಿತಗೊಂಡಿರುವುದನ್ನು ಸೂಚಿಸುತ್ತದೆ.
ಸೋಶಿಯಲ್ ಮೀಡಿಯಾ ಬಳಕೆದಾರರು ತಕ್ಷಣವೇ ಗಮನ ಸೆಳೆದಿದ್ದು, ಉತ್ತರ ಪ್ರದೇಶ–ಬಿಹಾರ ಪ್ರದೇಶವು ಕೇವಲ ಭಾರತದಲ್ಲೇ ಅಲ್ಲ, ಜಗತ್ತಿನ ಮಟ್ಟದಲ್ಲಿಯೇ ಅತ್ಯಂತ ಪ್ರಕಾಶಮಾನ ಪ್ರದೇಶಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂಬುದನ್ನು. “ಬಿಹಾರ ಜಗತ್ತಿನಲ್ಲೇ ಅತ್ಯಂತ ಹೊಳೆಯುವ ಪ್ರದೇಶವೇ?” ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದರೆ, ಮತ್ತೊಬ್ಬರು “ಬಿಹಾರ, ಜ್ಞಾನೋದಯದ ನಾಡು, ಈಗ ಅತ್ಯಂತ ಪ್ರಕಾಶಮಾನವಾಗಿದೆ” ಎಂದು ಹೇಳಿದ್ದಾರೆ.
ಮೂರನೇ ವ್ಯಕ್ತಿ, “ಯುಪಿ–ಬಿಹಾರ ಪಟ್ಟಿಯ ಈ ಬೆಳಕು ಹೆಚ್ಚಳ ಕಳೆದ 10–15 ವರ್ಷಗಳಲ್ಲಿ ಭಾರತ ಸಾಧಿಸಿರುವ ಅತ್ಯಂತ ಆಶ್ಚರ್ಯಕರ ಸಂಗತಿ. ಪ್ರತಿಯೊಂದು ಕೊನೆಗೂ ವಿದ್ಯುತ್ ತಲುಪಿರುವುದು, ಕೈಗಾರಿಕೆ ಹೆಚ್ಚುತ್ತಿರುವುದು, ಭಾರತದಲ್ಲೇ ವೇಗವಾಗಿ ಏರುತ್ತಿರುವ ತಲಾ ಆದಾಯ, ಮತ್ತು ಎಲ್ಲರಿಗೂ ಲಾಭವಾಗುತ್ತಿರುವ ಜನಸಾಂದ್ರತೆ—ಇವೆಲ್ಲವೂ ನೇರವಾಗಿ ಬಾಹ್ಯಾಕಾಶದಿಂದಲೂ ಕಾಣುವಷ್ಟು ಹೊಳೆಯುತ್ತಿವೆ” ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ವ್ಯಕ್ತಿ, “ನಾನು ಬಿಹಾರವನ್ನು ಬಹಳ ಬಾರಿ ಟೀಕಿಸುತ್ತೇನೆ, ಹೊಸ ಮುಖ್ಯಮಂತ್ರಿ ಬಗ್ಗೆ ಸಂತೋಷವೂ ಇಲ್ಲ. ಆದರೆ ಈ ವಿಷಯದಲ್ಲಿ ಮಾಡಿದ ಕೆಲಸ ಅದ್ಭುತ. ಇಷ್ಟು ಹೆಚ್ಚಿನ ಜನಸಾಂದ್ರತೆಯ ನಡುವೆ, ಸಾಮಾನ್ಯ ದಿನಗಳಲ್ಲಿ 21–23 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಮಾಡುತ್ತಿರುವುದು (ಹಿಂದೆ 6–8 ಗಂಟೆಗಳಷ್ಟೇ ಸಿಗುತ್ತಿತ್ತು) ಅಸಾಧಾರಣ ಸಾಧನೆ” ಎಂದು ಹೇಳಿದ್ದಾರೆ.
ಈ ಅಧ್ಯಯನ 60 ಡಿಗ್ರಿ ದಕ್ಷಿಣ ಅಕ್ಷಾಂಶದಿಂದ 70 ಡಿಗ್ರಿ ಉತ್ತರ ಅಕ್ಷಾಂಶದವರೆಗೆ, ಬಹುತೇಕ ವಾಸಸ್ಥಳಗಳನ್ನೆಲ್ಲ ಒಳಗೊಂಡಿತ್ತು. ವಿಜ್ಞಾನಿಗಳು ಕತ್ತಲೆಯ ಹೆದ್ದಾರಿಯಲ್ಲಿರುವ ಟೋಲ್‌ಬೂತ್ ಮಟ್ಟದ ಸಣ್ಣ ಬೆಳಕು ಮೂಲಗಳನ್ನೂ ಹಿಡಿಯುವಲ್ಲಿ ಯಶಸ್ವಿಯಾದರು.
“ಎನರ್ಜಿ ಕ್ಷೇತ್ರದ ಒಳನೋಟಗಳನ್ನು ಅನಾವರಣಗೊಳಿಸುವುದು, ಈ ಗಂಭೀರ ಸಮಯದಲ್ಲಿ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ಮುಂದುವರಿಸಲು ನಾಸಾ ಡೇಟಾ ನೆರವಾಗುತ್ತಿರುವ ಮಾರ್ಗಗಳಲ್ಲಿ ಒಂದಷ್ಟೇ,” ಎಂದು ಮೇರಿಲ್ಯಾಂಡ್‌ನ ಗ್ರೀನ್‌ಬೆಲ್ಟ್‌ನ ನಾಸಾದ ಗಾಡರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‌ನ ವಾತಾವರಣ ಮತ್ತು ಡೇಟಾ ವ್ಯವಸ್ಥೆಗಳ ಉಪನಿರ್ದೇಶಕ ಮಿಗುಯೆಲ್ ರೋಮನ್ ಹೇಳಿದರು. “ರಾತ್ರಿ ಹೊತ್ತಿನ ಭೂಮಿಯು ನಮಗೆ ಕಲಿಸುವುದಕ್ಕೆ ಇನ್ನೂ ಅನೇಕ ಸಂಗತಿಗಳಿವೆ.” ಎಂದು ಹೇಳಿದ್ದಾರೆ.