ಕನ್ಯಾಕುಮಾರಿ / ತೂತುಕೂಡಿ / ತಿರುನೆಲ್ವೇಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಕ್ಷೇತ್ರ ಪುನರ್‌ವಿಭಜನೆ (Delimitation) ಮಸೂದೆಯನ್ನು ಮುಂದೂಡಲು ಮಹಿಳಾ ಮೀಸಲಾತಿಯನ್ನು ನೆಪವಾಗಿ ಬಳಸಿರುವುದು ರಾಷ್ಟ್ರವಿರೋಧಿ ಕ್ರಮ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಬಿಜೆಪಿ ಮೈತ್ರಿ ಪಕ್ಷವಾದ ಎಐಎಡಿಎಂಕೆಯ ಮೇಲೂ ಅವರು ವಾಗ್ದಾಳಿ ನಡೆಸಿ, ಅದರ ನಾಯಕತ್ವವು ಭ್ರಷ್ಟಾಚಾರ ಕಾರಣದಿಂದ ಕೇಸರಿ ಪಕ್ಷಕ್ಕೆ ಶರಣಾಗಿದೆ ಎಂದು ಹೇಳಿದರು.
ಡಿಎಂಕೆ ನೇತೃತ್ವದ ಸೆಕ್ಯುಲರ್ ಪ್ರೋಗ್ರೆಸಿವ್ ಅಲಯನ್ಸ್ ಅಭ್ಯರ್ಥಿಗಳ ಪರ ನಿನ್ನೆ ತಮಿಳು ನಾಡಿನ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಮೋದಿ ದೇಶಕ್ಕೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ, ಆದರೆ ನಿಜವಾದ ಯೋಜನೆ ಭಾರತದಲ್ಲಿನ ಚುನಾವಣಾ ನಕ್ಷೆಯನ್ನು ಬದಲಿಸುವುದಾಗಿತ್ತು. ಅವರು ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳು, ಉತ್ತರ-ಪೂರ್ವ ರಾಜ್ಯಗಳು ಮತ್ತು ಸಣ್ಣ ರಾಜ್ಯಗಳ ಸ್ಥಾನಗಳನ್ನು ಕಡಿಮೆ ಮಾಡಲು ಬಯಸಿದ್ದರು ಎಂದು ಆರೋಪಿಸಿದರು.
ಮೂಲತಃ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲಿ ಅಧಿಕಾರದ ಸಮತೋಲನವನ್ನು ಬದಲಿಸಿ ದಕ್ಷಿಣ ಭಾರತದ ಪ್ರತಿನಿಧಿತ್ವವನ್ನು ದುರ್ಬಲಗೊಳಿಸಲು ಉದ್ದೇಶಿಸಿತ್ತು; ಇದರಲ್ಲಿ ತಮಿಳುನಾಡು, ಕೇರಳ ಸೇರಿದಂತೆ ಉತ್ತರಾಖಂಡ್, ಛತ್ತೀಸ್‌ಗಢದಂತಹ ಸಣ್ಣ ರಾಜ್ಯಗಳು ಮತ್ತು ಉತ್ತರ-ಪೂರ್ವ ರಾಜ್ಯಗಳು ಸೇರಿವೆ ಎಂದು ಅವರು ಹೇಳಿದರು.
ಎನ್ ಡಿಎ ಸರ್ಕಾರದ ದುರುದ್ದೇಶದಿಂದಾಗಿ ನಾವು ಸಂಸತ್ತಿನಲ್ಲಿ ಆ ಮಸೂದೆಯನ್ನು ತಡೆದು ಸೋಲಿಸಿದ್ದೇವೆ. ನಮ್ಮ ದೇಶದ ಯಾರದ್ದೇ ಪ್ರತಿನಿಧಿತ್ವವನ್ನು ಕಸಿದುಕೊಳ್ಳುವ ಯಾವುದೇ ಮಸೂದೆಯನ್ನು ನಾವು ಮುಂದಿನ ದಿನಗಳಲ್ಲಿ ಕೂಡ ಸೋಲಿಸುತ್ತೇವೆ. ಬಿಜೆಪಿಗೆ ಮಹಿಳಾ ಮೀಸಲಾತಿ ಬೇಕಾದರೆ, 2023ರ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಹೇಳಿದರು.
ಮೋದಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪೂರ್ಣ ನಿಯಂತ್ರಣದಲ್ಲಿ ಇದ್ದಾರೆ ಎಂದು ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮೆರಿಕಾ–ಭಾರತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವಾಗ ದೇಶದ ಕೃಷಿ, ಕೈಗಾರಿಕೆ, ಡೇಟಾ ಮತ್ತು ಇಂಧನ ಭದ್ರತೆಯನ್ನು ಸಮರ್ಪಿಸಿದ್ದಾರೆ ಎಂದು ಆರೋಪಿಸಿದರು. ತೂತುಕೂಡಿಯ ಸಾಯರ್ಪುರಂನಲ್ಲಿ ಪ್ರಚಾರ ನಡೆಸುವ ವೇಳೆ ರಾಹುಲ್ ಗಾಂಧಿ ಈ ಆರೋಪಗಳನ್ನು ಮಾಡಿದರು. “ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ಮೋದಿ ಅವರನ್ನು ‘ಸರ್’ ಎಂದು ಕರೆಯುತ್ತಾರೆ ಎಂದು ಹೇಳುತ್ತಾರೆ, ಇದು ಭಾರತೀಯ ಪ್ರಧಾನಮಂತ್ರಿಗೆ ಅವಮಾನ ಎಂದರು.
ಇದೇ ರೀತಿಯ ವರ್ತನೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಂದಲೂ ಮೋದಿ ನಿರೀಕ್ಷಿಸುತ್ತಾರೆ ಎಂದು ಹೇಳಿದ ರಾಹುಲ್ ಗಾಂಧಿ, ಸ್ಟಾಲಿನ್ ಮೋದಿ ಅವರನ್ನು ‘ಸರ್’ ಎಂದು ಕರೆಯಬೇಕು ಎಂದು ಬಯಸುತ್ತಾರೆ, ಆದರೆ ಅದು ಎಂದಿಗೂ ನಡೆಯುವುದಿಲ್ಲ,” ಎಂದರು. ಎಐಎಡಿಎಂಕೆ ಪಕ್ಷವು ಬಿಜೆಪಿಗೆ ತಮಿಳುನಾಡಿಗೆ ಪ್ರವೇಶಿಸಲು ಸಾಧನವಾಗಿದೆ, ಏಕೆಂದರೆ ಅದರ ನಾಯಕತ್ವವು ಭ್ರಷ್ಟಾಚಾರದ ಕಾರಣದಿಂದ ಮೈತ್ರಿ ಪಕ್ಷಕ್ಕೆ ತಲೆಬಾಗಿದೆ ಎಂದು ಆರೋಪಿಸಿದರು.
ತಮಿಳುನಾಡಿನ ನಿಯಂತ್ರಣವನ್ನು ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹಸ್ತಾಂತರಿಸುವ ಆರ್‌ಎಸ್‌ಎಸ್ ಮತ್ತು ಎಐಎಡಿಎಂಕೆಯ ಯೋಜನೆಯನ್ನು ನಾವು ಸೋಲಿಸುತ್ತೇವೆ ಎಂದರು.
ಆರ್‌ಎಸ್‌ಎಸ್ ದ್ರಾವಿಡ ತತ್ವವನ್ನು ದ್ವೇಷಿಸುತ್ತದೆ, ಏಕೆಂದರೆ ತಮಿಳರು ಅವರನ್ನು ಪ್ರತಿರೋಧಿಸುತ್ತಾರೆ. ಬಿಜೆಪಿ ಸಂವಿಧಾನ ಹೇಳುವುದನ್ನು ಒಪ್ಪುವುದಿಲ್ಲ, ಅದು ವಿವಿಧ ರಾಜ್ಯಗಳ ಪ್ರಭಾವವನ್ನು ದುರ್ಬಲಗೊಳಿಸಿ ವಿಶೇಷವಾಗಿ ತಮಿಳುನಾಡನ್ನು ದೆಹಲಿಯಿಂದ ಆಡಳಿತ ನಡೆಸಲು ಬಯಸುತ್ತದೆ ಎಂದರು.