ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಆರೋಪಿಸಿರುವ ಬಿಜೆಪಿ, ಸಾಮಾನ್ಯ ಪ್ರವೇಶ ಪರೀಕ್ಷೆ (CET) ಬರೆಯಲು ಬಂದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಹೇಳಲಾಗಿದ್ದು, ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದೆ.
ಬೆಂಗಳೂರಿನ ಮಡಿವಾಳದ ಒಂದು ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಯ ವೇಳೆ ಐವರು ಬ್ರಾಹ್ಮಣ ವಿದ್ಯಾರ್ಥಿಗಳು, ಪರೀಕ್ಷಾ ಹಾಲ್‌ಗೆ ಪ್ರವೇಶಿಸಿ ಪರೀಕ್ಷೆ ಬರೆಯಬೇಕೆಂದರೆ ತಮ್ಮ ಪವಿತ್ರ ಜನಿವಾರ ತೆಗೆಯಬೇಕೆಂದು ಮೇಲ್ವಿಚಾರಕರು ಹೇಳಿದ್ದಾರೆ ಎಂದು ಆರೋಪಿಸಿದರು.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹ್ಜಾದ್ ಪೂನವಾಲಾ, ಎಕ್ಸ್ ಪೋಸ್ಟ್ ನಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಹಿಂದುವಾಗಿರುವುದು ಅಪರಾಧವೇ? ಇಲ್ಲಿ ಜನಿವಾರ ಧರಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಪರೀಕ್ಷಾ ಹಾಲ್‌ಗೆ ಬಿಡಲಿಲ್ಲ, ಇಂತಹದ್ದೇ ಘಟನೆ ಕಳೆದ ವರ್ಷ ಕೂಡ ನಡೆದಿತ್ತು. ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯಸರ್ಕಾರ ತುಷ್ಠೀಕರಣ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಚಿಹ್ನೆಗಳ ವಿಚಾರದಲ್ಲಿ ದ್ವಂದ್ವ ಮಾನದಂಡಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ತೃಪ್ತಿಪಡಿಸುವ ರಾಜಕೀಯವನ್ನು ನಾವು ನೋಡಿದ್ದೇವೆ. ಮುಸ್ಲಿಂ ಮೀಸಲಾತಿ, ಮುಸ್ಲಿಂಗಳಿಗೆ ಮಾತ್ರ ಬಜೆಟ್, ಮುಸಲ್ಮಾನರಿಗೆ ಮೀಸಲಾದ ಗುತ್ತಿಗೆ ಕೆಲಸಗಳು ಇವೆ ಎಂದು ಹೇಳಿದರು. ಪೂನವಾಲಾ ಇತರ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿವೆ ಎಂದು ಹೇಳಿ, ಹಿಜಾಬ್ ಸಂಬಂಧಿತ ವಿವಾದಗಳನ್ನು ಉಲ್ಲೇಖಿಸಿದರು.
ಇದು ಮೊದಲ ಬಾರಿಗೆ ಅಲ್ಲ. ತೆಲಂಗಾಣ ಮತ್ತು ಇತರ ರಾಜ್ಯಗಳಲ್ಲಿ ತಿಲಕ ಮತ್ತು ಮಂಗಳಸೂತ್ರ ತೆಗೆದುಹಾಕಲಾಗಿದೆ. ಆದರೆ ಹಿಜಾಬ್ ಒಪ್ಪಿಗೆಯಾಗಿದೆ. ಹಿಂದೂಗಳಿಗೆ ಎರಡನೇ ದರ್ಜೆಯ ವರ್ತನೆ ನೀಡಲಾಗುತ್ತಿದೆ ಎಂದು ಹೇಳಿದರು.