ಲಕ್ನೋ: ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಕಿರಿಯ ಮಗ ಅಬಾನ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಝಾನ್ಸಿ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಝಾನ್ಸಿ ಜೈಲಿನಲ್ಲಿರುವ ತಮ್ಮ ಸಹೋದರ ಅಲಿ ಅಹ್ಮದ್ ಅವರನ್ನು ಭೇಟಿಯಾಗಿ ವಾಪಸ್ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ವೇಳೆ ಝಾನ್ಸಿ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯ ಪೂಂಚ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.
ಅಬಾನ್ ಹಾಗೂ ಅವರ ಸಹಚರರು ಪ್ರಯಾಣಿಸುತ್ತಿದ್ದ ಬಿಳಿ ಬಣ್ಣದ ಹುಂಡೈ ಕ್ರೆಟಾ ಕಾರು ಅತಿ ವೇಗದಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅಬಾನ್ ಹಾಗೂ ಅವರ ಸ್ನೇಹಿತ ಸೋನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಯುವಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಮಾತ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
2005ರಲ್ಲಿ ನಡೆದಿದ್ದ ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು 2023ರ ಫೆಬ್ರವರಿಯಲ್ಲಿ ಅತೀಕ್ ಅಹ್ಮದ್ ಗ್ಯಾಂಗ್ ಹತ್ಯೆ ಮಾಡಿತ್ತು. ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅತೀಕ್ ಅಹ್ಮದ್‌ನ ಮಗ ಅಸದ್ ಅಹ್ಮದ್‌ನನ್ನು ಉತ್ತರ ಪ್ರದೇಶದ ಪೊಲೀಸರು 2023ರ ಏಪ್ರಿಲ್ 13ರಂದು ಝಾನ್ಸಿಯಲ್ಲಿ ಎನ್‌ಕೌಂಟರ್ ಮಾಡಿ ಕೊಂದಿದ್ದರು.
ಅತೀಕ್ ಅಹ್ಮದ್ ಉತ್ತರ ಪ್ರದೇಶದ ಒಬ್ಬ ಪ್ರಮುಖ ಗ್ಯಾಂಗ್‌ಸ್ಟರ್ ಮತ್ತು ಮಾಜಿ ರಾಜಕಾರಣಿ. ಭಾರತೀಯ ಅಪರಾಧ ಲೋಕ ಮತ್ತು ರಾಜಕೀಯದಲ್ಲಿ ಅತ್ಯಂತ ವಿವಾದಾತ್ಮಕ ವ್ಯಕ್ತಿಯಾಗಿದ್ದ ಈತ ಸುಮಾರು ನಾಲ್ಕು ದಶಕಗಳ ಕಾಲ ಅಪರಾಧ ಲೋಕದಲ್ಲಿ ಸಕ್ರಿಯನಾಗಿದ್ದ.