ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ತ್ರೀವ ಪ್ರತಿಭಟನೆ ಎದುರಿಸಿದ್ದಾರೆ. ಅವರ ಕಾರಿನ ಮೇಲೆ ಕಲ್ಲುಗಳಿಂದ ದಾಳಿ ನಡೆದಿದ್ದು, ಕೆಸರು ಎರಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಹಾಲಿಸಹರ್‌ನಲ್ಲಿ ಲಾಕಪ್ ಡೆತ್ ಆಗಿದ್ದ ಟಿಎಂಸಿ (TMC) ಕಾರ್ಯಕರ್ತರೊಬ್ಬರ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮಮತಾ ಬ್ಯಾನರ್ಜಿ ಅವರ ಕಾರನ್ನು ಸುತ್ತುವರೆದ ಪ್ರತಿಭಟನಾಕಾರರು, ಕಳ್ಳಿ ಕಳ್ಳಿ ಅಂತಾ ಘೋಷಣೆ ಕೂಗಿ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಗೊಂದಲ ಸೃಷ್ಟಿಸಲು ಹೊರಗಿನವರನ್ನು ಕರೆತರಲಾಗಿತ್ತು ಎಂದು ಹೇಳುವ ಮೂಲಕ ಈ ಘಟನೆಗೆ ನೇರವಾಗಿ ಬಿಜೆಪಿಯೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಪ್ರತಿಭಟನಾಕಾರರು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ದೊಡ್ಡ ಇಟ್ಟಿಗೆಗಳನ್ನು ಎಸೆದಿದ್ದಾರೆ. ಇಡೀ ದಾರಿಯುದ್ದಕ್ಕೂ ಕಲ್ಲುಗಳನ್ನು ಎಸೆಯಲಾಯಿತು ಎಂದು ಹೇಳುತ್ತಾ ಬ್ಯಾನರ್ಜಿ ಘಟನೆಯನ್ನು ಖಂಡಿಸಿದ್ದಾರೆ. ಟಿಎಂಸಿ ಕಾರ್ಯಕರ್ತನ ಸಾವಿನ ನಂತರ ಆ ಕುಟುಂಬವನ್ನು ಬೆದರಿಸಲಾಗುತ್ತಿದೆ ಎಂದೂ ಬ್ಯಾನರ್ಜಿ ಆರೋಪಿಸಿದರು.
ಭದ್ರತೆಗಾಗಿ ಪೊಲೀಸರು ಗಲಭೆಕೋರರೆಂದು ಶಂಕಿಸಲಾದ ವ್ಯಕ್ತಿಗಳನ್ನೇ ಅವಲಂಬಿಸಿದ್ದಾರೆ. ಅಧಿಕಾರಿಗಳು ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು. "ಪೊಲೀಸ್ ವಶದಲ್ಲಿ ಸಾವುಗಳು ಸಂಭವಿಸುತ್ತಿವೆ. ಬಂಗಾಳ ಈಗ ದುಷ್ಕರ್ಮಿಗಳ ಕೈವಶವಾಗಿದೆ ಎಂದು ಬ್ಯಾನರ್ಜಿ ಹೇಳಿದರು. ಮೃತ ಕಾರ್ಮಿಕನ ಪತ್ನಿಯೊಂದಿಗೆ ಹಿಂದಿನ ದಿನವೇ ಎರಡು ಬಾರಿ ಮಾತನಾಡಿದ್ದಾಗಿ ಮತ್ತು ಭೇಟಿ ನೀಡುವುದಾಗಿ ಅವರಿಗೆ ತಿಳಿಸಿದ್ದಾಗಿ ಬ್ಯಾನರ್ಜಿ ಹೇಳಿದರು.
ಅಲ್ಲದೆ, ಶಾಸಕರೊಬ್ಬರು ಕುಟುಂಬಕ್ಕೆ ಮನೆಯಿಂದ ಹೊರಹೋಗದಂತೆ ಎಚ್ಚರಿಕೆ ನೀಡಿದ್ದಾರೆ ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ ಎಂದು ಅವರು ಆರೋಪಿಸಿದರು.
"ಪೊಲೀಸರ ವಿರುದ್ಧ ನನಗೆ ಯಾವುದೇ ಕೋಪವಿಲ್ಲ. ಗೃಹ ಸಚಿವರೇ ಸ್ವತಃ ಈ ಅಶಾಂತಿಯನ್ನು ಪ್ರಚೋದಿಸುತ್ತಿದ್ದಾರೆ .ಬಂಗಾಳದಲ್ಲಿ "ಬಿಜೆಪಿ ಪ್ರಾಯೋಜಿತ ಭಯೋತ್ಪಾದನೆ" ನಡೆಯುತ್ತಿದೆ. ದಾಳಿ ಎಷ್ಟು ತೀವ್ರವಾಗಿತ್ತೆಂದರೆ ಕಾರಿನಕಿಟಕಿಗಳು ತೆರೆದಿದ್ದಿದ್ದರೆ ನಮ್ಮ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿತ್ತು ಎಂದು ಅವರು ಹೇಳಿದ್ದಾರೆ.