ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರು ಗುದ್ದಿದ ರಭಸಕ್ಕೆ ಸೈನಿಕನೋರ್ವ ಗಾಳಿಯಲ್ಲಿ ದೂರಕ್ಕೆ ಹಾರಿ ಬಿದ್ದಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೈದರಾಬಾದ್ ನ ಹೈದರ್ ಶಾ ಕೋಟೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿ ವೇಗವಾಗಿ SUV ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಸೋಮವಾರ ಮುಂಜಾನೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 47 ವರ್ಷದ ನಿವೃತ್ತ ಸೇನಾ ಯೋಧ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭೀಕರ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅತಿವೇಗದ ಡಿಕ್ಕಿಯ ಭೀಕರತೆಯನ್ನು ದೃಶ್ಯಗಳು ತೋರಿಸಿವೆ.
ಅಪಘಾತ ಹೇಗಾಯಿತು?
ಸೋಮವಾರ ಮುಂಜಾನೆ ಸುಮಾರು 5.30ರ ವೇಳೆಗೆ ಎಸ್‌ಎಂಪಿ ಶಾಲೆ ಸಮೀಪ ಈ ದುರಂತ ಸಂಭವಿಸಿದ್ದು, ಪೊಲೀಸರ ಪ್ರಕಾರ, ಮಹೀಂದ್ರಾ XUV ಕಾರೊಂದು ಅತಿವೇಗದಲ್ಲಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿತ್ತು.
ಈ ವೇಳೆ ಕಾರು ಎರಡು ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಡಿ. ರವೀಂದರ್ ಎಂದು ಗುರುತಿಸಲಾಗಿದೆ. 20 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ್ದ ನಿವೃತ್ತ ಸೇನಾ ಸುಬೇದಾರ್ ರವೀಂದರ್, ಭದ್ರತಾ ಸಿಬ್ಬಂದಿಯಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು.
ಡಿಕ್ಕಿಯ ರಭಸ ಎಷ್ಟಿತ್ತೆಂದರೆ ರವೀಂದರ್ ಗಾಳಿಯಲ್ಲಿ ಹಲವು ಅಡಿ ಎತ್ತರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯೂ ನಜ್ಜುಗುಜ್ಜಾಗಿದ್ದು, ಅದರ ಸವಾರ ಹಾಗೂ ಪ್ರಯಾಣಿಕರಿಗೆ ಮೂಳೆ ಮುರಿತ ಸೇರಿದಂತೆ ಗಂಭೀರ ಗಾಯಗಳಾಗಿವೆ. ಇಬ್ಬರಿಗೂ ಸಮೀಪದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಹಬ್ಬದ ಸಂಭ್ರಮದ ಬಳಿಕ ಕುಡಿದ ಮತ್ತಿನಲ್ಲಿ ಚಾಲನೆ
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ನಾರ್ಸಿಂಗಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಚಾಲಕನನ್ನು ವಿಚಾರಣೆಗೊಳಪಡಿಸಿದ್ದಾರೆ. ಆಹಾರ ವಿತರಣಾ ಸಿಬ್ಬಂದಿಯಾಗಿರುವ ವೀರೇಶ್ ಎಂಬಾತನೇ SUV ಚಾಲನೆ ಮಾಡುತ್ತಿದ್ದ ಎಂದು ಗುರುತಿಸಲಾಗಿದೆ. ಆತನಿಗೆ ಬ್ರೀತ್ ಅನಲೈಸರ್ ಪರೀಕ್ಷೆ ನಡೆಸಿದಾಗ, ಸ್ಥಳೀಯ ಬೋನಾಲು ಹಬ್ಬದ ಸಂಭ್ರಮದ ಬಳಿಕ ಆತ ಭಾರೀ ಪ್ರಮಾಣದಲ್ಲಿ ಮದ್ಯ ಸೇವಿಸಿದ್ದದ್ದು ದೃಢಪಟ್ಟಿದೆ.
ಚಾಲಕ ಸೇರಿ ನಾಲ್ವರ ಬಂಧನ
ಅಪಘಾತಕ್ಕೆ ಕಾರಣರಾದವರ ವಿರುದ್ಧ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಚಾಲಕ ವೀರೇಶ್ ವಿರುದ್ಧ ಕೊಲೆ ಉದ್ದೇಶವಿಲ್ಲದ ಅಪರಾಧಿ ನರಹತ್ಯೆ ಸೇರಿದಂತೆ ಕಠಿಣ ಕಾನೂನು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
SUV ಮಾಲೀಕ ಕ್ರಾಂತಿ ಗೌಡ್ ಹಾಗೂ ಕಾರಿನಲ್ಲಿದ್ದ ಇತರ ಇಬ್ಬರು ಪ್ರಯಾಣಿಕರನ್ನೂ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗೆ ವಾಹನ ಚಲಾಯಿಸಲು ಉದ್ದೇಶಪೂರ್ವಕವಾಗಿ ಅವಕಾಶ ನೀಡಿದ ಆರೋಪದಡಿ ಅವರ ವಿರುದ್ಧ ಪ್ರಚೋದನೆ ಮತ್ತು ಸಹಕಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅಪಘಾತದ ದೃಶ್ಯ
ಭೀಕರ ಅಪಘಾತದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೈದರಾಬಾದ್ ಹೊರವಲಯದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಹಾಗೂ ರಾಂಗ್ ರೂಟ್‌ನಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿಬಂದಿವೆ.