ನವದೆಹಲಿ: ಭಾರತದ ಯುವಕರು ದೇಶದ ಡೆಮೋಗ್ರಾಫಿಕ್ ಡಿವಿಡೆಂಡ್, ಯುವಶಕ್ತಿಯ ಸರಿಯಾಗಿ ಬಳಸಿದರೆ ದೇಶಕ್ಕೆ ಅಪಾರ ಲಾಭ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಇಂದು ಬೆಳಗ್ಗೆ ಮೋಹನ್ ಭಾಗವತ್ ಅವರು ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಯುವಜನರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು, ಅವರ ಸಾಮರ್ಥ್ಯವನ್ನು ದೇಶದ ಅಭಿವೃದ್ಧಿಗೆ ಬಳಸಿದರೆ ಭಾರತಕ್ಕೆ ಅಪಾರ ಲಾಭವಾಗಲಿದೆ. ಆದರೆ ಯುವಶಕ್ತಿಯನ್ನು ಸರಿಯಾಗಿ ಬೆಳೆಸದೆ ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಇದೇ ಸಮಾಜಕ್ಕೆ ಹೊರೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಾತಂತ್ರ್ಯ ದಿನದಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಯುವಕರು ಡೆಮೋಗ್ರಾಫಿಕ್ ಡಿವಿಡೆಂಡ್. ಅವರನ್ನು ಸರಿಯಾಗಿ ಬೆಳೆಸಿದರೆ ನಮಗೆ ಅಪಾರ ಲಾಭವಾಗುತ್ತದೆ. ಇಲ್ಲದಿದ್ದರೆ ಸಮಾಜಕ್ಕೆ ಹೊರೆಯಾಗಬಹುದು” ಎಂದು ಹೇಳಿದರು.
ಅಂತೆಯೇ ಇದು ಕಳೆದ ಹತ್ತು ದಿನಗಳಲ್ಲಿ ಜೆನ್ Z ಯುವಕರೊಂದಿಗೆ ಭಾಗವತ್ ನಡೆಸಿದ ಎರಡನೇ ಸಂವಾದ ಇದಾಗಿದೆ.
‘30 ವರ್ಷಗಳ ಬಳಿಕ ನೀವೂ ವೃದ್ಧರಾಗುತ್ತೀರಿ’
ಯುವಕರು ತಮ್ಮ ಭವಿಷ್ಯದ ಬಗ್ಗೆ ಮಾತ್ರ ಯೋಚಿಸದೆ, ಮುಂದಿನ ಪೀಳಿಗೆಯ ಅಗತ್ಯಗಳ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಭಾಗವತ್ ಸಲಹೆ ನೀಡಿದರು. ಮುಂದಿನ 30 ವರ್ಷಗಳಲ್ಲಿ ಇಂದಿನ ಯುವಕರೂ ವಯಸ್ಸಾದವರಾಗುತ್ತಾರೆ. ಹೀಗಾಗಿ ಈಗಿನ ನಿರ್ಧಾರಗಳು ಭವಿಷ್ಯದ ಪೀಳಿಗೆಯ ಮೇಲೂ ಪರಿಣಾಮ ಬೀರುತ್ತವೆ ಎಂಬುದನ್ನು ಯುವಕರು ಅರ್ಥಮಾಡಿಕೊಳ್ಳಬೇಕು ಎಂದರು.
‘ಅಮೆರಿಕ, ಚೀನಾ ಜೊತೆ ಭಾರತವನ್ನು ಹೋಲಿಸಬೇಡಿ’
ಭಾರತದ ಯುವಕರು ಮೊದಲು ಭಾರತವು ಅಮೆರಿಕ, ಆಸ್ಟ್ರೇಲಿಯಾ, ಚೀನಾ ಅಥವಾ ನ್ಯೂಜಿಲೆಂಡ್‌ನಂತಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ತನ್ನದೇ ಆದ ಮಾನದಂಡಗಳನ್ನು ರೂಪಿಸಿಕೊಳ್ಳಬೇಕು ಎಂದು ಭಾಗವತ್ ಹೇಳಿದರು.
“ನಾವು ಭಾರತ. ನಮ್ಮದೇ ಹೆಮ್ಮೆ, ಗೌರವ ಮತ್ತು ಘನತೆ ಇದೆ. ನಮಗೆ ಬೇಕಾದ ಅಭಿವೃದ್ಧಿಯ ಸ್ವರೂಪ ಮತ್ತು ಪ್ರಗತಿಯ ಮಾನದಂಡಗಳ ಬಗ್ಗೆ ನಾವೇ ಯೋಚಿಸಬೇಕು. ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸಾಗಬೇಕು ದೇಶದ ಧ್ವಜವನ್ನು ಸಾಕಷ್ಟು ಪ್ರಯತ್ನಗಳ ಬಳಿಕ ಎತ್ತರದಲ್ಲಿ ಹಾರಿಸಿದ ಉದಾಹರಣೆಯನ್ನು ನೀಡಿದ ಅವರು, ತ್ರಿವರ್ಣ ಧ್ವಜವು ಪ್ರತಿನಿಧಿಸುವ ಮೌಲ್ಯಗಳೇನು ಮತ್ತು ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಷ್ಟು ಪರಿಶ್ರಮ ಅಗತ್ಯ ಎಂಬುದರ ಕುರಿತು ಪ್ರತಿಯೊಬ್ಬರೂ ಚಿಂತಿಸಬೇಕು ಎಂದರು.
“ಇದು ನಮ್ಮ ಹೊಣೆಗಾರಿಕೆ. ನಾವು ಇತರರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳಬಾರದು” ಎಂದು ಅವರು ಹೇಳಿದರು. ‘ಭಾರತ ಕೇವಲ ಹಣ ಸಂಪಾದಿಸುವುದಕ್ಕೆ ಸೀಮಿತವಲ್ಲ’ ಪ್ರಪಂಚದ ಬಹುತೇಕ ದೇಶಗಳು ಅಭಿವೃದ್ಧಿಯನ್ನು ಭೌತಿಕ ಮತ್ತು ಆರ್ಥಿಕ ದೃಷ್ಟಿಕೋನದಿಂದ ನೋಡುತ್ತವೆ. ಆದರೆ ಭಾರತದ ದೃಷ್ಟಿಕೋನ ಕೇವಲ ಹಣ ಸಂಪಾದಿಸುವುದಕ್ಕೆ ಸೀಮಿತವಾಗಿಲ್ಲ. ಭಾರತದಲ್ಲಿ ನಾವು ಕೇವಲ ಹಣ ಸಂಪಾದಿಸುವ ಬಗ್ಗೆ ಯೋಚಿಸುವುದಿಲ್ಲ. ‘ಹಣವನ್ನು ಕೋಳಿಯೂ ತಿನ್ನುವುದಿಲ್ಲ’ ಎಂಬ ಮಾತಿದೆ. ನಮ್ಮ ದೃಷ್ಟಿಕೋನ ಹೀಗಿದೆ” ಎಂದು ಅವರು ಹೇಳಿದರು.
ಉದ್ಯಮಶೀಲತೆಗೆ ಒತ್ತು ನೀಡಬೇಕು
ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಅಗತ್ಯವಿದೆ. ಯುವಕರು ತಮ್ಮ ದಾರಿಯಲ್ಲಿ ಎದುರಾಗುವ ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿ, ಯಶಸ್ಸಿನತ್ತ ಸಾಗಬೇಕು. ಉದ್ಯೋಗ ಎಂದರೆ ಕೇವಲ ಸರ್ಕಾರಿ ಅಥವಾ ಖಾಸಗಿ ಉದ್ಯೋಗವಲ್ಲ; ಶ್ರಮದ ಕೆಲಸ ಮಾಡುವವರೂ ದುಡಿಯುವ ಜನರೇ ಆಗಿದ್ದು, ಅವರ ಶ್ರಮಕ್ಕೂ ಗೌರವ ನೀಡಬೇಕು ಎಂದು ಭಾಗವತ್ ಹೇಳಿದರು.
ಭಾರತದ ಸಮಸ್ಯೆಗಳಿಗೆ ಭಾರತದ್ದೇ ಪರಿಹಾರ
ಭಾರತದ ಜನಸಂಖ್ಯೆ ದೊಡ್ಡದಾಗಿದ್ದು, ಕೆನಡಾ, ಅಮೆರಿಕ ಮತ್ತು ಚೀನಾಕ್ಕಿಂತ ಭೌಗೋಳಿಕವಾಗಿ ಹಲವು ರೀತಿಯಲ್ಲಿ ವಿಭಿನ್ನವಾಗಿದೆ. ಹೀಗಾಗಿ ಆ ದೇಶಗಳು ಅನುಸರಿಸುವ ಮಾದರಿಯನ್ನು ಭಾರತ ನೇರವಾಗಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭಾಗವತ್ ಹೇಳಿದರು.
ಕಡಿಮೆ ಜನಸಂಖ್ಯೆ, ವಿಶಾಲ ಭೂಪ್ರದೇಶ ಅಥವಾ ಅಪಾರ ನೈಸರ್ಗಿಕ ಸಂಪನ್ಮೂಲ ಹೊಂದಿರುವ ದೇಶಗಳಿಗೆ ಉದ್ಯೋಗ ಸೃಷ್ಟಿಯೊಂದೇ ಪ್ರಮುಖ ಚಿಂತೆಯಾಗಿರಬಹುದು. ಆದರೆ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದ ಸಮಸ್ಯೆಗಳಿಗೆ ಪ್ರತ್ಯೇಕ ಚಿಂತನಾ ವಿಧಾನ ಮತ್ತು ಆಳವಾದ ಅಧ್ಯಯನ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
‘ವಿಶ್ವಕ್ಕೆ ದಾರಿ ತೋರಿಸುವ ಹೊಣೆ ಭಾರತದ್ದು’
ವಿಶ್ವವು ತನ್ನ ಅಪೂರ್ಣ ದೃಷ್ಟಿಕೋನದಿಂದಾಗಿ ಹಲವು ಸಮಸ್ಯೆಗಳಲ್ಲಿ ಸಿಲುಕಿದೆ. ಭಾರತದ ದೃಷ್ಟಿಕೋನ ಮತ್ತು ಸಮತೋಲನದ ಚಿಂತನೆಯ ಮೂಲಕ ಜಗತ್ತಿಗೆ ಭವಿಷ್ಯದ ದಾರಿ ತೋರಿಸುವ ಹೊಣೆಗಾರಿಕೆ ಭಾರತಕ್ಕಿದೆ ಎಂದು ಭಾಗವತ್ ಹೇಳಿದರು.
“ನಮ್ಮ ದೃಷ್ಟಿಕೋನದ ಮೂಲಕ ವಿಶ್ವಕ್ಕೆ ಭವಿಷ್ಯದ ದಾರಿಯನ್ನು ತೋರಿಸಿ, ಅದಕ್ಕೆ ಸಮತೋಲನ ತರುವ ಹೊಣೆ ನಮ್ಮ ಮೇಲಿದೆ. ಅದಕ್ಕಾಗಿ ನಾವು ಸಿದ್ಧರಾಗಬೇಕು” ಎಂದು ಅವರು ಹೇಳಿದರು.