ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ದೆಹಲಿ ಭೇಟಿಯ ನಂತರ ಮಹಾರಾಷ್ಟ್ರ ರಾಜಕಾರಣಕ್ಕೆ ಗುಡ್ ಬೈ ಹೇಳಿ, ರಾಷ್ಟ್ರ ರಾಜಕಾರಣಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ಮಹಾರಾಷ್ಟ್ರದ ಜನ ಮತ್ತು ಕೇಂದ್ರ ನಾಯಕತ್ವವು ತಮಗೆ ರಾಜ್ಯದ ಜವಾಬ್ದಾರಿಯನ್ನು ವಹಿಸಿದೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ರಾಷ್ಟ್ರ ರಾಜಕಾರಣಕ್ಕೆ ಬರುವ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮಹಾರಾಷ್ಟ್ರ ಸಿಎಂ, ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಲು ನಾನು ದೆಹಲಿಗೆ ಬಂದಿದ್ದೇನೆ ಎಂದರು.
"ನಾನು ದೆಹಲಿಯಲ್ಲಿರಲಿ ಅಥವಾ ಮುಂಬೈನಲ್ಲಿರಲಿ, ಜನ ಊಹಾಪೋಹಗಳನ್ನು ಮಾಡುತ್ತಲೇ ಇರುತ್ತಾರೆ. ಹಲವರಿಗೆ ಬೇರೆ ಕೆಲಸವಿಲ್ಲ. ಆದ್ದರಿಂದ ಅವರು ನನ್ನ ಬಗ್ಗೆ ಚರ್ಚಿಸುತ್ತಾರೆ. ಅವರು ಅದನ್ನು ಆನಂದಿಸಲಿ" ಎಂದು ತಿರುಗೇಟು ನೀಡಿದರು.
ಬಿಜೆಪಿಯ ಹೊಸ ರಾಷ್ಟ್ರೀಯ ತಂಡದ ಬಗ್ಗೆ ಕೇಳಿದಾಗ, ಫಡ್ನವೀಸ್, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಇನ್ನೂ ಆ ತಂಡವನ್ನು ನೋಡಿಲ್ಲ. ನಾನು ಸಭೆಯಿಂದ ಹೊರಬಂದಿದ್ದೇನೆ ಎಂದು ನಿಮಗೆ ತಿಳಿದಿದೆ. ಆದರೆ ತಂಡವನ್ನು ಘೋಷಿಸಿದ್ದರೆ ಮತ್ತು ಮಹಾರಾಷ್ಟ್ರದ ಯಾರಾದರೂ ಅದರಲ್ಲಿದ್ದರೆ, ನಾವು ಸಂತೋಷ ಪಡುತ್ತೇನೆ. ನಾನು ಇಡೀ ತಂಡವನ್ನು ಒಮ್ಮೆ ನೋಡಿ ನಂತರ ಅದರ ಬಗ್ಗೆ ಮಾತನಾಡುತ್ತೇನೆ" ಎಂದರು.
ಇನ್ನು ಪ್ರಧಾನಿ ಭೇಟಿ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರು ಫಡ್ನವೀಸ್, ಭೇಟಿ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಹಾಗೂ ಕೇಂದ್ರ-ರಾಜ್ಯ ಜಂಟಿ ಯೋಜನೆಗಳಿಗೆ ಹೆಚ್ಚಿನ ಬೆಂಬಲ ಕೋರುವ ಕುರಿತು ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರ ಮಾರ್ಗದರ್ಶನ ಮಹಾರಾಷ್ಟ್ರದ ಬೆಳವಣಿಗೆಗೆ ಅತ್ಯಂತ ಮುಖ್ಯವಾದುದು. ಈ ಭೇಟಿಯು ತಮಗೆ ಸಕಾರಾತ್ಮಕ ಶಕ್ತಿಯನ್ನು ನೀಡಿದೆ. ಅಭಿವೃದ್ಧಿ ದೃಷ್ಟಿಯಿಂದ ಅವರ ಮಾರ್ಗದರ್ಶನ ಹಾಗೂ ರಾಜ್ಯಕ್ಕೆ ಅವರು ನೀಡುವ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಧನ್ಯವಾದ ಅರ್ಪಿಸಿದ್ದಾರೆ.