ನವದೆಹಲಿ: ದೋಷಪೂರಿತ ಪ್ರಶ್ನೆಪತ್ರಿಕೆಗಳ ಕಾರಣದಿಂದಾಗಿ ಯುಜಿಸಿ-ನೆಟ್ (UGC-NET) ನ ಮೂರು ವಿಷಯಗಳ ಮರುಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ನಿರ್ಧಾರವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಜೂನ್ 22ರಿಂದ 30ರವರೆಗೆ ಸಮಾಜಶಾಸ್ತ್ರ, ಇಂಗ್ಲಿಷ್ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳ ಯುಜಿಸಿ-ನೆಟ್ ಪರೀಕ್ಷೆಗಳು ನಡೆದಿದ್ದವು. ಆದರೆ, ಪ್ರಶ್ನೆಪತ್ರಿಕೆಗಳಲ್ಲಿನ ದೋಷಗಳು ಮತ್ತು ಹಳೆಯ ಪ್ರಶ್ನೆಗಳ ಪುನರಾವರ್ತನೆ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳ ಬಳಿಕ ಈ ಮೂರು ವಿಷಯಗಳ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಮರುಪರೀಕ್ಷೆ ನಡೆಸಲಾಗುವುದು ಎಂದು ಎನ್‌ಟಿಎ ನೆನ್ನೆ ತಿಳಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, 'ಮೋದಿ ಜೀ, ನಿಮ್ಮ ಎನ್‌ಟಿಎ (NTA) ಈಗಷ್ಟೇ ಏನು ಮಾಡಿದೆ ಎಂಬುದನ್ನು ನೋಡಿ. ವರ್ಷಗಳ ಕಾಲ ತಯಾರಿ ನಡೆಸಿ, ಅರ್ಜಿಗಳನ್ನು ಭರ್ತಿ ಮಾಡಿ, ಶುಲ್ಕ ಪಾವತಿಸಿ, ದೂರದ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಿದ್ದ ಸಾವಿರಾರು ಅಭ್ಯರ್ಥಿಗಳು ಈಗ ಸೆಪ್ಟೆಂಬರ್‌ನಲ್ಲಿ ಅದೆಲ್ಲವನ್ನೂ ಮತ್ತೆ ಮಾಡಬೇಕಿದೆ. ತಪ್ಪು ಮಾಡುವುದು NTA, ಆದರೆ ಶಿಕ್ಷೆ ಅನುಭವಿಸುವುದು ವಿದ್ಯಾರ್ಥಿಗಳು' ಎಂದು ಹೇಳಿದ್ದಾರೆ.
'ದೇಶದ ಶೈಕ್ಷಣಿಕ ವ್ಯವಸ್ಥೆಯು 'ತೀವ್ರ ಲೋಪದೋಷಗಳಿಂದ ಕೂಡಿದೆ'. ನಾನು ಕೋಟಾ, ಡೆಹ್ರಾಡೂನ್ ಮತ್ತು ಪ್ರಯಾಗರಾಜ್‌ನಲ್ಲಿಯೂ ಇದನ್ನೇ ಹೇಳಿದ್ದೇನೆ. ಮುಂದೆಯೂ ಹೇಳುತ್ತಲೇ ಇರುತ್ತೇನೆ. ಇದೀಗ ಇದೊಂದು ಶಿಕ್ಷಣ ವ್ಯವಸ್ಥೆಯಾಗಿ ಉಳಿದಿಲ್ಲ. ಇದೊಂದು ಸಂಪನ್ಮೂಲ ಹೀರುವ ಯಂತ್ರವಾಗಿದೆ. ಇದು ನಿಮ್ಮ ಹಣ, ನಿಮ್ಮ ಅಮೂಲ್ಯ ವರ್ಷ, ಮಾನಸಿಕ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನೆಲ್ಲ ಕಸಿದುಕೊಳ್ಳುತ್ತದೆಯೇ ಹೊರತು ಪ್ರತಿಯಾಗಿ ಏನನ್ನೂ ನೀಡುವುದಿಲ್ಲ; ಕನಿಷ್ಠಪಕ್ಷ ಉದ್ಯೋಗವನ್ನೂ ಕೂಡ' ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಪರೀಕ್ಷೆಗಳು ನಡೆಯುವ ಬಹಳ ಮುಂಚೆಯೇ ಪ್ರಶ್ನೆ ಪತ್ರಿಕೆಗಳ ಗೌಪ್ಯತೆಗೆ ಧಕ್ಕೆ ಉಂಟಾಗಿತ್ತೇ ಎಂದು ಪ್ರಶ್ನಿಸಿದ ಅವರು, 'NTA ಇನ್ನೂ ಮೂಲಭೂತ ಪ್ರಶ್ನೆಗೆ ಉತ್ತರಿಸಿಲ್ಲ. ಪರೀಕ್ಷೆಗೂ ಮುನ್ನವೇ ಈ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವೇ? ಗೌಪ್ಯತೆಗೆ ಧಕ್ಕೆ ಉಂಟಾದ ಇತರ ಎಲ್ಲ ಪ್ರಕರಣಗಳಂತೆಯೇ, ಇಲ್ಲೂ ಕೂಡ ಯಾರೂ ಹೊಣೆಗಾರರಾಗುವುದಿಲ್ಲ ಎಂಬುದು ನನಗೆ ಖಚಿತವಾಗಿದೆ' ಎಂದು ಅವರು ಹೇಳಿದರು.
'ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇವಲ ಮೊದಲ ಹೆಜ್ಜೆಯೇ ಹೊರತು ಕೊನೆಯದಲ್ಲ. NTA ನಾಯಕತ್ವವನ್ನೂ ಸಹ ಇದಕ್ಕೆ ಹೊಣೆಗಾರರನ್ನಾಗಿ ಮಾಡಬೇಕು' ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಇಂಗ್ಲಿಷ್ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 9 ರಂದು ಮರುಪರೀಕ್ಷೆ ನಡೆಯಲಿದ್ದು, ಸಮಾಜಶಾಸ್ತ್ರ ವಿಷಯದ ಪರೀಕ್ಷೆಯು ಸೆಪ್ಟೆಂಬರ್ 10 ರಂದು ನಿಗದಿಯಾಗಿದೆ ಎಂದು ಎನ್‌ಟಿಎ (NTA) ಪ್ರಕಟಿಸಿದೆ.
ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಈ ಮರುಪರೀಕ್ಷೆಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಅಲ್ಲದೆ, ಉಳಿದ 84 ವಿಷಯಗಳ ಫಲಿತಾಂಶಗಳನ್ನು ನಿಗದಿತ ಸಮಯದಲ್ಲೇ ಪ್ರಕಟಿಸಲಾಗುವುದು ಮತ್ತು ಒಟ್ಟಾರೆ ಸೀಟುಗಳ ಹಂಚಿಕೆಯಲ್ಲಿ ಯಾವುದೇ ಕಡಿತವಿರುವುದಿಲ್ಲ ಎಂದು ಎನ್‌ಟಿಎ ತಿಳಿಸಿದೆ.