ರಾಂಚಿ: ಜಾರ್ಖಂಡ್‌ನಲ್ಲಿ ಉದ್ಯೋಗ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜೆಎಲ್‌ಕೆಎಂ ನಾಯಕ ದೇವೇಂದ್ರ ಮಹ್ತೊ ಸೇರಿದಂತೆ ಆರು ಪ್ರತಿಭಟನಾಕಾರರಲ್ಲಿ ಮೂವರು, ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ.
2014 ರಿಂದ ಹೊರಗುತ್ತಿಗೆ ಸಂಸ್ಥೆ ನಡೆಸುತ್ತಿದ್ದ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಘೋಷಿಸಿದ ನಂತರ ಈ ಬೆಳವಣೆಯಾಗಿದೆ.
16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮಹ್ತೊ ಸೋಮವಾರ ಮಧ್ಯರಾತ್ರಿಯ ವೇಳೆಗೆ ಉಪವಾಸ ಸತ್ಯಾಗ್ರಹ ಕೈಬಿಟ್ಟರು.
ಪ್ರೇಮ್ ನಾಯಕ್ ಮತ್ತು ಉಮ್ಮೆ ಹಬೀಬಾ ಎಂಬ ಇಬ್ಬರು ಪ್ರತಿಭಟನಾಕಾರರು ಕೂಡ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ಆದರೆ ರಾಹುಲ್ ಕ್ರಾಂತಿ, ಸಬಿತಾ ಕುಮಾರಿ ಮತ್ತು ರೂಪೇಶ್ ಪಾಲ್ ಎಂಬ ಇತರ ಮೂವರು ತಮ್ಮ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ ಎಂದು ಜುಲೈ 25 ರಿಂದ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಆಂದೋಲನದ ನೇತೃತ್ವ ವಹಿಸಿರುವ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಸುಧಾರಣಾ ಮಂಚ್‌ನ ಸದಸ್ಯರು ತಿಳಿಸಿದ್ದಾರೆ.
ಹೊರಗುತ್ತಿಗೆ ಸಂಸ್ಥೆ ಟಿಎಸ್‌ಆರ್ ಡೇಟಾ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ (ಟಿಡಿಪಿಎಲ್) ನಡೆಸಿದ ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆ ಸೇರಿದಂತೆ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದ ನಂತರ, ಮಂಗಳವಾರ 25 ನೇ ದಿನಕ್ಕೆ ತಲುಪಿದ ಪ್ರತಿಭಟನೆಯನ್ನು ಹಿಂಪಡೆಯಲು ಪ್ರತಿಭಟನಾಕಾರರು ಕರೆ ನೀಡಬಹುದು.
"ಇಂದು ನಮ್ಮ ಪ್ರತಿಭಟನೆ 25 ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ಘೋಷಣೆಯ ನಂತರ ನಾವು ಪ್ರತಿಭಟನೆಯನ್ನು ಮುಂದುವರಿಸಬೇಕೆ ಅಥವಾ ಹಿಂತೆಗೆದುಕೊಳ್ಳಬೇಕೆ ಎಂದು ನಿರ್ಧರಿಸಬಹುದು" ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಯೊಬ್ಬರು ಹೇಳಿದರು.
ಸೋಮವಾರ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವಾಲಯದಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಂತರ ಪರೀಕ್ಷೆಗಳನ್ನು ರದ್ದುಗೊಳಿಸುವ ಘೋಷಣೆ ಹೊರಬಿದ್ದಿದೆ.