ಭಾರತದ ರಾಷ್ಟ್ರಗೀತೆಯಾಗಿರುವ ಜನ ಗಣ ಮನವನ್ನು ದೇಶದಿಂದ ತೆಗೆದುಹಾಕಿ, ಅದರ ಜಾಗದಲ್ಲಿ ‘ವಂದೇ ಮಾತರಂ’ ಹಾಡನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎಂದು ಶಕ್ತಿಮಾನ್ ನಟ ಮುಕೇಶ್ ಖನ್ನಾ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಆವೋ ಬಚ್ಚೋಂ ಎಂಬ ನೂತನ ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮುಖೇಶ್ ಖನ್ನಾ ಅವರು ರಾಷ್ಟ್ರಗೀತೆಯ ವಿಚಾರದಲ್ಲಿ ತಮ್ಮ ಅನಿಸಿಕೆ ತಿಳಿಸಿದ್ದಾರೆ.
‘ಜನ ಗಣ ಮನ’ ಗೀತೆಯ ಕುರಿತು ಮಾತನಾಡಿರುವ ಮುಖೇಶ್ ಖನ್ನಾ, ‘ಜನ ಗಣ ಮನ ನಮ್ಮ ದೇಶದ ನಿಜವಾದ ರಾಷ್ಟ್ರಗೀತೆಯಲ್ಲ. ಅದನ್ನು ಬ್ರಿಟನ್ನಿನ ರಾಣಿ ಎಲಿಜಬೆತ್ ಅವರನ್ನು ಹೊಗಳಲು ರವೀಂದ್ರನಾಥ ಠಾಗೋರ್ ಅವರು ಬರೆದಿದ್ದರು.
ಅದನ್ನೇ ನಾವು ಸ್ವೀಕರಿಸಿ ಗೌರವಿಸುತ್ತಾ ಬಂದಿದ್ದೇವೆ. ಆದರೆ ಅದು ನಮ್ಮದಲ್ಲ. ವಂದೇ ಮಾತರಂ ಮಾತ್ರವೇ ನಮ್ಮ ನಿಜವಾದ ರಾಷ್ಟ್ರಗೀತೆ ಆಗಬೇಕು. ಲತಾ ಮಂಗೇಷ್ಕರ್ ಅವರು ಅದನ್ನು ಅತ್ಯಂತ ಸುಂದರವಾಗಿ ಹಾಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
‘ಜನ ಗಣ ಮನ ಗೀತೆಯನ್ನು ಆದಷ್ಟು ಬೇಗ ನಮ್ಮ ದೇಶದಿಂದ ತೆಗೆದುಹಾಕಬೇಕು ಮತ್ತು ವಂದೇ ಮಾತರಂ ಅನ್ನು ಅಧಿಕೃತವಾಗಿ ಜಾರಿಗೆ ತರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಪ್ರತಿಯೊಂದು ಶಾಲೆಯಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ ಹಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ತಾವು ಕೂಡ ಸುಮಾರು 7 ನಿಮಿಷಗಳ ಸುದೀರ್ಘ ‘ವಂದೇ ಮಾತರಂ’ ಗೀತೆಯನ್ನು ರೆಕಾರ್ಡ್ ಮಾಡಿದ್ದು, ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಮುಖೇಶ್ ಖನ್ನಾ ತಿಳಿಸಿದ್ದಾರೆ.