ಚೆನ್ನೈ: ಮುಖ್ಯಮಂತ್ರಿ ವಿಜಯ್ ಯು- ಟರ್ನ್ ಹೊಡೆದಿದ್ದು, ತಮಿಳುನಾಡು ಸರ್ಕಾರ ಮತ್ತೊಂದು ಆದೇಶವನ್ನು ಒಂದೇ ದಿನದಲ್ಲಿ ವಾಪಸ್ ಪಡೆದುಕೊಂಡಿದೆ. ವಿದ್ಯಾರ್ಥಿಗಳು ಪ್ರತಿಭಟನೆ ಮತ್ತು ರಾಜಕೀಯ ಪ್ರದರ್ಶನಗಳಲ್ಲಿ ಭಾಗವಹಿಸುವುದನ್ನು ತಡೆಯುವ ಉದ್ದೇಶದಿಂದ ಹೊರಡಿಸಿದ್ದ ಆದೇಶವನ್ನು ಕೇವಲ 24 ಗಂಟೆಗಳಲ್ಲೇ ಹಿಂಪಡೆದಿದೆ.
ಎಡಪಂಥೀಯ ಪಕ್ಷಗಳು ಮತ್ತು 'ತಮಿಳುನಾಡು ಕಾಕ್ರೋಚ್ ಜನತಾ ಪಾರ್ಟಿ' (CJP) ಆಯೋಜಿಸುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಪ್ರತಿಭಟನೆಗಳಿಂದ ವಿದ್ಯಾರ್ಥಿಗಳನ್ನು ದೂರವಿಡಲು ಕ್ರಮ ಕೈಗೊಳ್ಳುವಂತೆ ಕಾಲೇಜು ಶಿಕ್ಷಣ ನಿರ್ದೇಶನಾಲಯವು (DCE) ಶಾಲೆಗಳು, ಕಾಲೇಜುಗಳು, ಪೊಲೀಸ್ ಮತ್ತು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿತ್ತು.
ಈ ಕ್ರಮವು CJPಯಿಂದ ಟೀಕೆಗೆ ಗುರಿಯಾಗಿತ್ತಲ್ಲದೇ ಇದನ್ನು 'ಸಂವಿಧಾನ ಬಾಹಿರ' ಎಂದು ಕರೆದಿತ್ತು. ಈ ಆದೇಶವು ರಾಜಕೀಯ ವಿವಾದಕ್ಕೆ ಕಾರಣವಾದ ನಂತರ ಸರ್ಕಾರವು ಅಂತಿಮವಾಗಿ ತನ್ನ ನಿರ್ಧಾರವನ್ನು ಬದಲಿಸಿದೆ.
ತಮಿಳುನಾಡಿನಾದ್ಯಂತ 'ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ' (NEET) ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಈ ನಿರ್ದೇಶನವನ್ನು ಹೊರಡಿಸಲಾಗಿತ್ತು. CJP ಮತ್ತು ಎಡಪಂಥೀಯ ಗುಂಪುಗಳಿಗೆ ಸಂಬಂಧಿಸಿದ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದವು. ಹೀಗಾಗಿ, ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ವಿದ್ಯಾರ್ಥಿಗಳಿಗೆ ತಿಳಿಹೇಳುವಂತೆ ಸರ್ಕಾರವು ಶಿಕ್ಷಣ ಸಂಸ್ಥೆಗಳು ಮತ್ತು ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ ಈ ಆದೇಶವು ಶೀಘ್ರದಲ್ಲೇ ರಾಜಕೀಯ ವಿವಾದದ ಕೇಂದ್ರಬಿಂದುವಾಯಿತು.
ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ವಿದ್ಯಾರ್ಥಿಗಳನ್ನು ನಿರ್ಬಂಧಿಸುವುದು ಅವರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರಬಹುದು ಎಂಬ ಟೀಕೆಗಳು ಕೇಳಿಬರುತ್ತಿದ್ದವು. ಹೆಚ್ಚುತ್ತಿದ್ದ ಟೀಕೆಗಳ ಹಿನ್ನೆಲೆಯಲ್ಲಿ ವಿಜಯ್ ಸರ್ಕಾರವು ಒಂದು ದಿನದಲ್ಲಿಯೇ ಆ ಆದೇಶವನ್ನು ವಾಪಸ್ ಪಡೆದುಕೊಂಡಿದೆ.