ಕಿರಣ್ ರಿಜಿಜು online desk
ದೇಶ

ಗಡಿಗಳನ್ನು ನಿರ್ಲಕ್ಷಿಸಿದ್ದೇ ಹಿಂದಿನ ಸರ್ಕಾರ- ಹಿಂದಿನ ತಪ್ಪು ಪುನರಾವರ್ತಿಸಲ್ಲ, ಭಾರತದ ಗಡಿ ರಕ್ಷಣೆಗೆ ಮೋದಿ ಸರ್ಕಾರ ಬದ್ಧ: ಕೇಂದ್ರ ಸಚಿವ ಕಿರಣ್ ರಿಜಿಜು

ಕೆಲವರು ಗಡಿ ವಿಚಾರದ ಬಗ್ಗೆ ಸುಲಭವಾಗಿ ಮಾತನಾಡುತ್ತಾರೆ. ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವುದು ಕಷ್ಟ. ಆದರೆ, ನರೇಂದ್ರ ಮೋದಿ ಸರ್ಕಾರ ಗಡಿ ಅಭಿವೃದ್ಧಿಗೆ ಬದ್ಧವಾಗಿದೆ.

ನವದೆಹಲಿ: ಗಡಿ ಪ್ರದೇಶಗಳನ್ನು ಹಲವು ದಶಕಗಳ ಕಾಲ ನಿರ್ಲಕ್ಷಿಸಲಾಗಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಗಡಿ ಪ್ರದೇಶಗಳ ಅಭಿವೃದ್ಧಿಗೆ “ಅಗ್ರ ಆದ್ಯತೆ” ನೀಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಗುರುವಾರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅರುಣಾಚಲ ಪ್ರದೇಶಕ್ಕೆ ಚೀನಾ ಸೇನೆ ಹೊಸದಾಗಿ ನುಸುಳಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಕೆಲವರು ಗಡಿ ವಿಚಾರದ ಬಗ್ಗೆ ಸುಲಭವಾಗಿ ಮಾತನಾಡುತ್ತಾರೆ. ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವುದು ಕಷ್ಟ. ಆದರೆ, ನರೇಂದ್ರ ಮೋದಿ ಸರ್ಕಾರ ಗಡಿ ಅಭಿವೃದ್ಧಿಗೆ ಬದ್ಧವಾಗಿದೆ. ಅರುಣಾಚಲ ಪ್ರದೇಶದ ಮಜಾ, ಗಲೇಮೋ ಮತ್ತು ತಕ್ಸಿಂಗ್ ಪ್ರದೇಶಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಕಾಮಗಾರಿಗಳನ್ನು ವೇಗಗೊಳಿಸುವ ಕೆಲಸ ಮಾಡಿದ್ದೇನೆ. ಹಿಂದೆ ಗಡಿಗಳನ್ನು ನಿರ್ಲಕ್ಷಿಸಲಾಗಿತ್ತು, ಆದರೆ. ಈಗ ಅವುಗಳಿಗೆ ಅಗ್ರ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಗಡಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಹಿಂದಿನ ನೀತಿಯನ್ನೂ ರಿಜಿಜು ಟೀಕಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರು 2013ರಲ್ಲಿ ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ನಾಯಕರಲ್ಲಿ ಎ.ಕೆ. ಆ್ಯಂಟನಿ ಅವರು ಅತ್ಯಂತ ಪ್ರಾಮಾಣಿಕರು. ರಕ್ಷಣಾ ಸಚಿವರಾಗಿದ್ದಾಗ ಕಾಂಗ್ರೆಸ್ ಸರ್ಕಾರದ ಗಡಿ ಮೂಲಸೌಕರ್ಯ ನಿರ್ಮಾಣ ಮಾಡದ ನೀತಿಯನ್ನು ಸಂಸತ್ತಿನಲ್ಲಿ ಅವರು ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ.

2013ರ ಸೆಪ್ಟೆಂಬರ್ 6ರಂದು ಲೋಕಸಭೆಯಲ್ಲಿ ಮಾತನಾಡಿದ್ದ ಆ್ಯಂಟನಿ, ಚೀನಾ ಗಡಿಯುದ್ದಕ್ಕೂ ಭಾರತಕ್ಕಿಂತ ಉತ್ತಮ ಮೂಲಸೌಕರ್ಯ ಅಭಿವೃದ್ಧಿಪಡಿಸಿತ್ತು ಎಂದು ಒಪ್ಪಿಕೊಂಡಿದ್ದರು. ಸ್ವಾತಂತ್ರ್ಯದ ನಂತರ ಹಲವು ವರ್ಷಗಳ ಕಾಲ ಭಾರತ ಅನುಸರಿಸಿದ್ದ ನೀತಿಯೇ ಗಡಿ ಅಭಿವೃದ್ಧಿಯಲ್ಲಿ ಹಿಂದುಳಿಯಲು ಕಾರಣ ಎಂದು ಅವರು ಹೇಳಿದ್ದರು.

ಗಡಿಯನ್ನು ಅಭಿವೃದ್ಧಿಪಡಿಸದಿರುವುದೇ ಉತ್ತಮ ರಕ್ಷಣಾ ತಂತ್ರ ಎಂಬ ನಂಬಿಕೆಯಿಂದ ಹಲವು ವರ್ಷಗಳ ಕಾಲ ಗಡಿ ಪ್ರದೇಶಗಳಲ್ಲಿ ರಸ್ತೆ ಹಾಗೂ ವಾಯುನೆಲೆಗಳನ್ನು ನಿರ್ಮಿಸಿರಲಿಲ್ಲ. ಈ ನಡುವೆ ಚೀನಾ ತನ್ನ ಗಡಿ ಪ್ರದೇಶಗಳಲ್ಲಿ ನಿರಂತರವಾಗಿ ಮೂಲಸೌಕರ್ಯ ಅಭಿವೃದ್ಧಿಪಡಿಸಿದ್ದರಿಂದ ಭಾರತಕ್ಕಿಂತ ಮುಂದಿದೆ ಎಂದು ಹೇಳಿದ್ದರು.

ಆದರೆ, ಯುಪಿಎ ಅಧಿಕಾರಕ್ಕೆ ಬರುವುದಕ್ಕೂ ಮುನ್ನವೇ ಹಿಂದಿನ ಸರ್ಕಾರಗಳು ಈ ನೀತಿಯನ್ನು ಬದಲಾಯಿಸಲು ಆರಂಭಿಸಿದ್ದವು ಎಂದು ಆ್ಯಂಟನಿ ಸ್ಪಷ್ಟಪಡಿಸಿದ್ದರು.

ಕಳೆದ 20-25 ವರ್ಷಗಳಲ್ಲಿ ಭಾರತೀಯ ಸರ್ಕಾರಗಳು ತಮ್ಮ ತಪ್ಪನ್ನು ಅರಿತು ಗಡಿ ಪ್ರದೇಶಗಳಲ್ಲಿ ಸಾಮರ್ಥ್ಯವನ್ನು ಬಲಪಡಿಸಲು ಕ್ರಮ ಕೈಗೊಂಡಿವೆ ಎಂದೂ ಅವರು ಹೇಳಿದ್ದರು.

ಅರುಣಾಚಲದಲ್ಲಿ 60 ಕಿ.ಮೀ. ಒಳನುಸುಳಿಕೆ ಆರೋಪ ತಳ್ಳಿಹಾಕಿದ ರಿಜಿಜು

ಇದೇ ವೇಳೆ ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ 60 ಕಿ.ಮೀ. ಒಳಗೆ ನುಸುಳಿದೆ ಎಂಬ ಆರೋಪಗಳನ್ನೂ ರಿಜಿಜು ಅವರು ತಳ್ಳಿಹಾಕಿದ್ದಾರೆ. ಆದರೆ ಸ್ಥಳೀಯರು ವ್ಯಕ್ತಪಡಿಸಿರುವ ಆತಂಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದ್ದಾರೆ.

ಭಾರತ-ಚೀನಾ ಗಡಿ ವಿಚಾರ ಗಂಭೀರ ವಿಷಯ. ಇಂತಹ ಸೂಕ್ಷ್ಮ ವಿಚಾರದಲ್ಲಿ ಸುಳ್ಳು ಆರೋಪ ಮಾಡಬೇಡಿ. ಹಿಂದಿನ ತಪ್ಪುಗಳನ್ನು ನಾವು ಪುನರಾವರ್ತಿಸಲು ಬಯಸುವುದಿಲ್ಲ. ಸ್ಥಳೀಯರ ಆತಂಕವನ್ನು ಸರ್ಕಾರ ಪರಿಹರಿಸಲಿದೆ ಮತ್ತು ಭಾರತದ ಭೂಭಾಗವನ್ನು ರಕ್ಷಿಸಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಉದ್ದಕ್ಕೂ ಶಾಂತಿ ಮತ್ತು ನೆಮ್ಮದಿ ಕಾಪಾಡುವುದು ಅತ್ಯಂತ ಮುಖ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಒತ್ತಿಹೇಳಿದೆ.

ಆಗಸ್ಟ್ 11ರಂದು ಮಾತನಾಡಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಭಾರತ-ಚೀನಾ ಗಡಿ ಪ್ರದೇಶಗಳಿಗೆ ಸಂಬಂಧಿಸಿದ ವಿಚಾರಗಳನ್ನು ಚೀನಾದೊಂದಿಗೆ ನಡೆಯುವ ಮಾತುಕತೆಯಲ್ಲಿ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದ್ದರು.

ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿಯು ಉಭಯ ದೇಶಗಳ ನಡುವಿನ ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡುವುದು ಅತ್ಯಂತ ಮಹತ್ವದ್ದು ಎಂದು ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಡಿಗೆ ಬೆಂಕಿ ಹಚ್ಚಿ, ಶಿಬಿರಗಳನ್ನೇ ಸ್ಫೋಟಿಸಿದ ಕಳ್ಳಬೇಟೆಗಾರರು: ಚಾಮರಾಜನಗರ ಎನ್‌ಕೌಂಟರ್ ಪ್ರತಿಕಾರಕ್ಕೆ 10 ಎಕರೆ ಅರಣ್ಯವೇ ಬಲಿ!

ದಾವಣಗೆರೆ: ಇಬ್ಬರು ಮಕ್ಕಳ ಸಹಿತ ದಂಪತಿ ಅನುಮಾನಾಸ್ಪದವಾಗಿ ನಾಪತ್ತೆ; ಮನೆಯಲ್ಲಿ ಪತ್ರ ಪತ್ತೆ!

2013ರ ಲೈಂಗಿಕ ದೌರ್ಜನ್ಯ ಪ್ರಕರಣ: ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ Tehelka ಮಾಜಿ ಸಂಪಾದಕ ತರುಣ್ ತೇಜಪಾಲ್

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ: ಕಾಂಗ್ರೆಸ್ ನಾಯಕರ ಮೌನಕ್ಕೆ ಮಲ್ಲಿಕಾರ್ಜುನ ಖರ್ಗೆ ಬೇಸರ, ‘ನನಗೆ ನೋವಾಗಿದೆ’ ಎಂದ ಅಧ್ಯಕ್ಷ..!

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಅಕ್ರಮವಾಗಿ ಮೊಬೈಲ್ ಕೊಟ್ಟಿದ್ದ ವ್ಯಕ್ತಿಯ ಬಂಧನ