ಭಾರತೀಯ ಯುವಕರು (ಸಾಂದರ್ಭಿಕ ಚಿತ್ರ) 
ದೇಶ

8.7 ಕೋಟಿ ಭಾರತೀಯ ಯುವಕರು ಓದು, ಉದ್ಯೋಗ, ತರಬೇತಿ ಯಾವುದರಲ್ಲೂ ಇಲ್ಲ: Niti Aayog

ಯುವಕರಿಗೆ ಕೈಗೆಟುಕುವ ದರದಲ್ಲಿ ಅಥವಾ ಸಬ್ಸಿಡಿ ಆಧಾರಿತ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಒದಗಿಸುವ ತುರ್ತು ಅಗತ್ಯವಿದೆ ಎಂದು ನೀತಿ ಆಯೋಗ ವರದಿ ಪ್ರತಿಪಾದಿಸಿದೆ.

ನವದೆಹಲಿ: ಭಾರತದಲ್ಲಿ ಸುಮಾರು 8.7 ಕೋಟಿ ಭಾರತೀಯ ಯುವಕರು ಓದು, ಉದ್ಯೋಗ, ತರಬೇತಿ ಯಾವುದರಲ್ಲೂ ತೊಡಗಿಸಿಕೊಂಡಿಲ್ಲ ಎಂದು ನೀತಿ ಆಯೋಗ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.

15 ರಿಂದ 29 ವರ್ಷದೊಳಗಿನ ಅಂದಾಜು 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ಯಾವುದೇ ಕೌಶಲ ತರಬೇತಿಯಲ್ಲಿ ತೊಡಗಿಸಿಕೊಂಡಿಲ್ಲ. ಯುವಕರಿಗೆ ಕೈಗೆಟುಕುವ ದರದಲ್ಲಿ ಅಥವಾ ಸಬ್ಸಿಡಿ ಆಧಾರಿತ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಒದಗಿಸುವ ತುರ್ತು ಅಗತ್ಯವಿದೆ ಎಂದು ನೀತಿ ಆಯೋಗ ವರದಿ ಪ್ರತಿಪಾದಿಸಿದೆ.

‘Reimagining Skilling for Viksit Bharat@2047’ ಎಂಬ ಶೀರ್ಷಿಕೆಯ ವರದಿಯನ್ನು ನೀತಿ ಆಯೋಗ ಪ್ರಕಟಿಸಿದ್ದು, 2021ರಲ್ಲಿ ನಡೆದ ರಾಷ್ಟ್ರೀಯ ಮಾದರಿ ಸಮೀಕ್ಷೆಯ (NSS) 78ನೇ ಸುತ್ತಿನ ದತ್ತಾಂಶದ ಆಧಾರದ ಮೇಲೆ ಈ ಅಂದಾಜು ಮಾಡಲಾಗಿದೆ.

ಯುವಕರಿಗೆ ಸ್ಥಳೀಯ ಉದ್ಯೋಗ ಮಾರುಕಟ್ಟೆಯ ಬೇಡಿಕೆ ಹಾಗೂ ಬೆಳೆಯುತ್ತಿರುವ ಹೊಸ ವಲಯಗಳಿಗೆ ಹೊಂದಿಕೊಳ್ಳುವ ತರಬೇತಿ ನೀಡಬೇಕು. ಸ್ವಯಂ ಉದ್ಯೋಗದ ಅವಕಾಶಗಳತ್ತಲೂ ಯುವಕರನ್ನು ಪ್ರೋತ್ಸಾಹಿಸಬೇಕು ಎಂದು ವರದಿ ಸಲಹೆ ನೀಡಿದೆ.

ಯುವಕರನ್ನು ಐದು ವಿಭಾಗಗಳಾಗಿ ವಿಂಗಡಣೆ

ಭಾರತದ ಕಾರ್ಮಿಕ ಶಕ್ತಿ ಮತ್ತು ಕಲಿಯುವವರ ಪರಿಸ್ಥಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ನೀತಿ ಆಯೋಗ ಐದು ವಿಭಾಗಗಳನ್ನು ಗುರುತಿಸಿದ್ದು, ಶಾಲಾ ಶಿಕ್ಷಣದಲ್ಲಿರುವವರು, ಉನ್ನತ ಶಿಕ್ಷಣ ಪಡೆಯುತ್ತಿರುವವರು, ಔಪಚಾರಿಕ ಮತ್ತು ಅನೌಪಚಾರಿಕ ಉದ್ಯೋಗದಲ್ಲಿರುವವರು, ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ಇಲ್ಲದ NEET (Not in Education, Employment or Training) ಯುವಕರು-ಮಹಿಳೆಯರು ಎಂದು ಐದು ವಿಭಾಗಗಳನ್ನು ಗುರುತಿಸಿದೆ.

15 ರಿಂದ 29 ವರ್ಷದೊಳಗಿನ ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ತೊಡಗಿಸಿಕೊಂಡಿರದವರು ಹಾಗೂ ನಿರುದ್ಯೋಗಿಗಳನ್ನು NEET (Not in Education, Employment or Training) ಯುವಕರು ಎಂದು ನೀತಿ ಆಯೋಗ ವ್ಯಾಖ್ಯಾನಿಸಿದೆ.

‘ಕೈಗೆಟುಕುವ ಕೌಶಲ ತರಬೇತಿ ಅಗತ್ಯ’

NEET ಯುವಕರು ಆದಾಯದ ಕೊರತೆ ಹಾಗೂ ಈಗಾಗಲೇ ಶಿಕ್ಷಣಕ್ಕಾಗಿ ಮಾಡಿರುವ ವೆಚ್ಚದ ಹೊರೆಯಿಂದಾಗಿ ಹೆಚ್ಚುವರಿ ತರಬೇತಿ ಪಡೆಯಲು ಕಷ್ಟಪಡುತ್ತಿದ್ದಾರೆ ಎಂದು ವರದಿ ಹೇಳಿದೆ. ವಿಶೇಷವಾಗಿ ಕಡಿಮೆ ಆದಾಯದ ಕುಟುಂಬಗಳ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಹಾಗೂ ಹಲವು ಸಂದರ್ಭಗಳಲ್ಲಿ ಖಾಸಗಿ ಟ್ಯೂಷನ್ ವೆಚ್ಚಗಳಿಂದ ಈಗಾಗಲೇ ಆರ್ಥಿಕ ಒತ್ತಡದಲ್ಲಿರುತ್ತಾರೆ.

ಹೀಗಾಗಿ ಪದವಿ ಶಿಕ್ಷಣದ ಜತೆಗೆ ಹಣ ಪಾವತಿಸಿ ಹೆಚ್ಚುವರಿ ಕೌಶಲ ತರಬೇತಿ ಪಡೆಯುವುದು ಅವರಿಗೆ ಕಷ್ಟವಾಗುತ್ತದೆ ಎಂದು ವರದಿ ತಿಳಿಸಿದೆ. ಆದ್ದರಿಂದ ಯುವಕರು ಮತ್ತು ಮಹಿಳೆಯರಿಗೆ ಕೈಗೆಟುಕುವ ಅಥವಾ ಸಬ್ಸಿಡಿ ದರದ ತರಬೇತಿ, ಅಗತ್ಯವಿರುವ ಕಡೆ ಆರ್ಥಿಕ ನೆರವು ನೀಡಬೇಕು ಎಂದು ನೀತಿ ಆಯೋಗ ಶಿಫಾರಸು ಮಾಡಿದೆ.

‘ಓದುತ್ತಲೇ ಗಳಿಸುವ ಅವಕಾಶ ಬೇಕು’

ವಿವಿಧ ವರ್ಗದ ಯುವಕರಿಗೆ ಕಲಿಕೆ ಮತ್ತು ಆದಾಯ ಗಳಿಕೆಯನ್ನು ಒಟ್ಟಿಗೆ ಮುಂದುವರಿಸುವ ಅವಕಾಶ ಕಲ್ಪಿಸುವುದು ಅತ್ಯಗತ್ಯ ಎಂದು ವರದಿ ಹೇಳಿದೆ. ಈಗಾಗಲೇ ಉದ್ಯೋಗದಲ್ಲಿರುವವರು ಹಾಗೂ NEET ಯುವಕರಿಗೆ ಮಧ್ಯ-ವೃತ್ತಿಜೀವನದ ಮರುಕೌಶಲ ತರಬೇತಿ, ಸ್ವಯಂ ಉದ್ಯೋಗದ ಮಾರ್ಗಗಳು ಮತ್ತು ಸ್ಥಳೀಯ ಬೇಡಿಕೆ ಹಾಗೂ ಹೊಸದಾಗಿ ಬೆಳೆಯುತ್ತಿರುವ ಕ್ಷೇತ್ರಗಳಿಗೆ ಹೊಂದುವ ತರಬೇತಿ ನೀಡುವ ಅಗತ್ಯವಿದೆ ಎಂದು ನೀತಿ ಆಯೋಗ ತಿಳಿಸಿದೆ.

ಡಿಗ್ರಿಗೆ ತಕ್ಕ ಉದ್ಯೋಗ ಸಿಗುತ್ತಿರುವುದು ಕೇವಲ ಶೇ.8.25 ಮಂದಿಗೆ ಮಾತ್ರ!

ವರದಿಯ ಮತ್ತೊಂದು ಪ್ರಮುಖ ಅಂಶವೆಂದರೆ, ಪದವಿ ಪಡೆದವರಲ್ಲಿ ಕೇವಲ ಶೇ.8.25ರಷ್ಟು ಮಂದಿ ಮಾತ್ರ ತಮ್ಮ ವಿದ್ಯಾರ್ಹತೆಗೆ ಹೊಂದುವ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ ಬಳಿಕ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಆದಾಯದ ಮೂಲ ಹುಡುಕುತ್ತಾರೆ.

ಈ ಸಂದರ್ಭದಲ್ಲಿ ತಮ್ಮ ವಿದ್ಯಾರ್ಹತೆಗೆ ಹೊಂದಿಕೆಯಾಗದಿದ್ದರೂ ಸ್ಥಿರ ಆದಾಯ ನೀಡುವ ಯಾವುದೇ ಉದ್ಯೋಗವನ್ನು ಆಯ್ಕೆ ಮಾಡುತ್ತಾರೆ. ಮತ್ತೊಂದೆಡೆ, ಕೆಲವರು ಉದ್ಯೋಗಕ್ಕೆ ಪರಿವರ್ತನೆಗೊಳ್ಳಲು ಸಾಧ್ಯವಾಗದೆ NEET ವರ್ಗಕ್ಕೆ ಸೇರುತ್ತಾರೆ ಎಂದು ನೀತಿ ಆಯೋಗ ವಿವರಿಸಿದೆ.

ವಿಕಸಿತ ಭಾರತ@2047 ಗುರಿ ಸಾಧಿಸಲು ಯುವಕರ ಕೌಶಲ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಶಿಕ್ಷಣದಿಂದ ಉದ್ಯೋಗಕ್ಕೆ ಸುಗಮ ಪರಿವರ್ತನೆ ಅತ್ಯಂತ ನಿರ್ಣಾಯಕವಾಗಿದೆ ಎಂದು ವರದಿ ಒತ್ತಿಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IAS ಅಧಿಕಾರಿ ನಿಗೂಢ ಕಣ್ಮರೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾಪತ್ತೆ ಆಗಿಲ್ಲ, ಆದ್ರೆ...: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

'ನಾವು ದೇಶದ್ರೋಹಿಗಳಾ?.. ಗಾಂಧಿ, ನೆಹರು, ಪಟೇಲ್, ಬೋಸ್ ನಿರ್ಧರಿಸಿದ ಆವೃತ್ತಿಯನ್ನೇ ಹಾಡುತ್ತಿದ್ದೇವೆ: ವಂದೇ ಮಾತರಂ ವಿವಾದಕ್ಕೆ Kharge ತಿರುಗೇಟು

ಶೂನ್ಯ ಬಡ್ಡಿ ದರ ಕೃಷಿ ಸಾಲಮಿತಿ 5 ಲಕ್ಷ ರೂಗಳಿಗೆ ಏರಿಕೆ ಸದುಪಯೋಗಕ್ಕೆ CM ಕರೆ

ತಮಿಳುನಾಡಲ್ಲಿ ಹುಟ್ಟುವ ಮಕ್ಕಳಿಗೆ CM ವಿಜಯ್ ಭರ್ಜರಿ ಗಿಫ್ಟ್: 1.28 ಲಕ್ಷ ಗೋಲ್ಡ್‌ ರಿಂಗ್‌ಗಳಿಗೆ ವರ್ಕ್ ಆರ್ಡರ್

3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ ಕಪೂರ್? ವೈರಲ್ ವಿಡಿಯೋ ಬಗ್ಗೆ ನಾದಿನಿ ಸಬಾ ಪಟೌಡಿ ಹೇಳಿದ್ದೇನು?