ನವದೆಹಲಿ: ಐಫೋನ್ ಇಎಂಐ ವಿಚಾರವಾಗಿ ಒಂದಿಡೀ ಕುಟಂಬ ಬಲಿಯಾದ ಸುದ್ದಿ ಹಸಿರಾಗಿರುವಂತೆಯೇ ಇತ್ತ ದೆಹಲಿಯಲ್ಲಿ ಇಂತಹುದೇ ಘಟನೆ ಮರುಕಳಿಸಿದೆ.
ಹೌದು.. ಆದಾಯದಲ್ಲಿ ಕುಸಿತ ಉಂಟಾಗಿ ಐಫೋನ್‌ನ ಮಾಸಿಕ ಕಂತುಗಳನ್ನು ಪಾವತಿಸಲು ಸಾಧ್ಯವಾಗದೆ ಒತ್ತಡಕ್ಕೆ ಒಳಗಾದ 30 ವರ್ಷದ ಡ್ಯಾನ್ಸ್ ಶಿಕ್ಷಕರೊಬ್ಬರು ಯಮುನಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ-ಪೂರ್ವ ದೆಹಲಿಯಲ್ಲಿ ನಡೆದಿದೆ.
ಅದೃಷ್ಟವಶಾತ್ ಅವರನ್ನು ರಕ್ಷಣಾ ತಂಡ ಸುರಕ್ಷಿತವಾಗಿ ದಡಕ್ಕೆ ಕರೆತಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 8.30ರ ವೇಳೆಗೆ ಕಾಲಿಂದಿ ಕುಂಜ್‌ನ ಭೋಲಾ ಘಾಟ್ ಬಳಿ ವ್ಯಕ್ತಿಯೊಬ್ಬರು ಯಮುನಾಗೆ ಹಾರಿದ್ದಾರೆ ಎಂಬ ಮಾಹಿತಿ ಗಸ್ತಿನಲ್ಲಿದ್ದ ಪೊಲೀಸರಿಗೆ ಲಭಿಸಿತು.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರವಾಹ ನಿಯಂತ್ರಣ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಬೋಟ್‌ನೊಂದಿಗೆ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿತು. ನದಿಯಲ್ಲಿ ವ್ಯಕ್ತಿಯೊಬ್ಬರು ಇರುವುದನ್ನು ಪತ್ತೆಹಚ್ಚಿದ ತಂಡ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿತು.
ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಓಖ್ಲಾದ ಸಂಜಯ್ ಕಾಲೋನಿ ನಿವಾಸಿ ದೀಪಕ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಡ್ಯಾನ್ಸ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಹೆಚ್ಚುವರಿಯಾಗಿ ತೋಟಗಾರಿಕೆ ಕೆಲಸವನ್ನೂ ಮಾಡುತ್ತಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಕಳೆದ ಕೆಲವು ತಿಂಗಳುಗಳಿಂದ ತಮ್ಮ ಆದಾಯ ಕಡಿಮೆಯಾಗಿದ್ದು, ಐಫೋನ್‌ನ ಮಾಸಿಕ EMI ಪಾವತಿಸುವುದು ಕಷ್ಟವಾಗಿತ್ತು ಎಂದು ದೀಪಕ್ ಪೊಲೀಸರಿಗೆ ತಿಳಿಸಿದ್ದಾರೆ.
ಕಂತು ಪಾವತಿಯ ಆರ್ಥಿಕ ಒತ್ತಡದಿಂದ ತೀವ್ರವಾಗಿ ನೊಂದಿದ್ದ ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.