ನವದೆಹಲಿ: ಯೋಗ ಗುರು ಬಾಬಾ ರಾಮದೇವ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು, ಮಹಿಳೆಯರ ಬಗ್ಗೆ ಅವರು ನೀಡಿರುವ ಹೇಳಿಕೆಗಳ ಬಗ್ಗೆ "ಆಲೋಚಿಸಬೇಕು", ಕೇಸರಿ ನಿಲುವಂಗಿ ಧರಿಸಿದ ಗುರು "ಸಭ್ಯತೆಯ ಎಲ್ಲಾ ಮಿತಿಗಳನ್ನು" ಮೀರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕರನ್ನು "ಜನರೇಷನ್ ಗಟರ್" ಎಂದು ಟೀಕಿಸಿದ್ದ ಕಂಗನಾ ರಣಾವತ್ ಅವರನ್ನು ಯೋಗ ಗುರು ಬಾಬಾ ರಾಮದೇವ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ 'ಆಕೆಯ ಹಿಂದಿನ ಚಟುವಟಿಕೆಗಳು ಹೇಗಿದ್ದವು?' ಎಂದು ಪ್ರಶ್ನಿಸಿದ್ದರು. ಇದು ಇಬ್ಬರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
"ಬಾಬಾ ರಾಮದೇವ್ ಬಗ್ಗೆ ಹೇಳುವುದಾದರೆ, ಅವರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಮಹಿಳೆಯ ಬಗ್ಗೆ ಅವರು ಮಾಡಿರುವ ಕಾಮೆಂಟ್‌ಗಳು ಸಮಾಜವೇ ನಾಚಿಕೆಪಡುವಂತಿವೆ. ಅವರು ತಾವು ಧರಿಸುವ ಕೇಸರಿ ನಿಲುವಂಗಿಗಳನ್ನು ಅವಮಾನಿಸಿದ್ದಾರೆ" ಎಂದು ಕಂಗನಾ ಕಿಡಿ ಕಾರಿದ್ದಾರೆ.
ಇದಕ್ಕೂ ಮೊದಲು, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಕಂಗನಾ, ತಾನು ರಾಮದೇವ್‌ಗಿಂತ "ಉತ್ತಮ ವ್ಯಕ್ತಿತ್ವ" ಹೊಂದಿದ್ದೇನೆ ಎಂದು ಹೇಳಿದ್ದರು. ಅಲ್ಲದೆ 'ಬಾಬಾ ಜೀ, ನನ್ನ ಯೌವನ ಅಥವಾ ಬೆಡ್‌ರೂಂ ಬಗ್ಗೆ ಹಗಲುಗನಸು ಕಾಣಬೇಡಿ' ಎಂದು ತಿರುಗೇಟು ನೀಡಿದ್ದರು.