ಸಾಂದರ್ಭಿಕ ಚಿತ್ರ 
ದೇಶ

'ಫೇಲ್ ಮಾಡ್ತೀನಿ, ಮರ್ಯಾದೆ ಹಾಳು ಮಾಡ್ತೀನಿ'; 10ನೇ ತರಗತಿ ವಿದ್ಯಾರ್ಥಿನಿ ಮೇಲೆ 4 ತಿಂಗಳು ಅತ್ಯಾಚಾರ ಆರೋಪ; ಶಾಲಾ ಶಿಕ್ಷಕನ ವಿರುದ್ಧ FIR

ಖಾಸಗಿ ಇಂಟರ್ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅದೇ ಶಾಲೆಯ ಶಿಕ್ಷಕನೊಬ್ಬ ನಾಲ್ಕು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಗೋರಖ್‌ಪುರ: 10ನೇ ತರಗತಿ ವಿದ್ಯಾರ್ಥಿನಿಯನ್ನು ಫೇಲ್ ಮಾಡುವುದಾಗಿ ಬೆದರಿಸಿ ಶಿಕ್ಷಕನೇ 4 ತಿಂಗಳು ಅತ್ಯಾಚಾರ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ವರದಿಯಾಗಿದೆ.

ಹೌದು.. ಖಾಸಗಿ ಇಂಟರ್ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅದೇ ಶಾಲೆಯ ಶಿಕ್ಷಕನೊಬ್ಬ ನಾಲ್ಕು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಬಾಲಕಿಯ ತಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಆಕೆ ತನ್ನ ತಾಯಿ, ತಾತ ಮತ್ತು ಕಿರಿಯ ಸಹೋದರಿಯೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆರೋಪಿಯಾಗಿರುವ ಶಿಕ್ಷಕ ಶಾಲಾ ಮ್ಯಾನೇಜರ್‌ನ ಪುತ್ರನಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ, ಶಿಕ್ಷಕನ ಕುಕೃತ್ಯ ಬಯಲು

15 ವರ್ಷದ ಬಾಲಕಿ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ತನ್ನೊಂದಿಗೆ ಬಾಲಕಿ ನಡೆಸಿದ್ದ ಫೋನ್ ಸಂಭಾಷಣೆಯ ರೆಕಾರ್ಡಿಂಗ್‌ನ್ನು ಆರೋಪಿ ಆನ್‌ಲೈನ್‌ನಲ್ಲಿ ಹರಿಬಿಟ್ಟು, ತನ್ನನ್ನು ಭೇಟಿಯಾಗುವಂತೆ ಒತ್ತಡ ಹೇರಿದ್ದ ಎನ್ನಲಾಗಿದೆ. ಇದರಿಂದ ಬಾಲಕಿ ತೀವ್ರವಾಗಿ ನೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಫೇಲ್ ಮಾಡುವುದಾಗಿ ಬೆದರಿಕೆ

ಬಾಲಕಿಯ ತಾತ ಶುಕ್ರವಾರ ನೀಡಿದ ದೂರಿನ ಪ್ರಕಾರ, ಸುಮಾರು ನಾಲ್ಕು ತಿಂಗಳ ಹಿಂದೆ ಶಾಲೆ ಮುಗಿದ ಬಳಿಕ ಆರೋಪಿ ಬಾಲಕಿಯನ್ನು ತನ್ನ ಕಚೇರಿ ಕೊಠಡಿಗೆ ಕರೆಸಿಕೊಂಡಿದ್ದ. ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದಾಗ, ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಹಾಗೂ ಸಾರ್ವಜನಿಕವಾಗಿ ಆಕೆಯ ಮಾನಹಾನಿ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂಬಿಸಿ ದೌರ್ಜನ್ಯ

ಮುಂದಿನ ಹಲವು ತಿಂಗಳುಗಳಲ್ಲಿ, ಗೋರಖ್‌ಪುರ ನಗರದಲ್ಲಿರುವ ಶಾಲೆಗೆ ಆಕೆಯ ಪ್ರವೇಶಕ್ಕೆ ವ್ಯವಸ್ಥೆ ಮಾಡುವುದಾಗಿ, ಬಾಡಿಗೆ ಮನೆ ಕೊಡಿಸುವುದಾಗಿ ಹಾಗೂ ಶಿಕ್ಷಣದ ವೆಚ್ಚವನ್ನು ತಾನೇ ಭರಿಸುವುದಾಗಿ ಭರವಸೆ ನೀಡಿ ಆರೋಪಿ ಬಾಲಕಿಯನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಭೇಟಿಯಾಗಲು ನಿರಾಕರಿಸಿದ ಬಳಿಕ ಆಡಿಯೋ ವೈರಲ್

ಇತ್ತೀಚೆಗೆ ಬಾಲಕಿ ಇನ್ನು ಮುಂದೆ ತನ್ನನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಆರೋಪಿಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ಆರೋಪಿ, ಇಬ್ಬರ ನಡುವಿನ ಫೋನ್ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್‌ನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದಾನೆ ಎನ್ನಲಾಗಿದೆ. ಆಡಿಯೋ ವೈರಲ್ ಆದ ಬಳಿಕ ಮಾನಸಿಕವಾಗಿ ನೊಂದ ಬಾಲಕಿ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

POCSO ಅಡಿ ಪ್ರಕರಣ

ಬಾಲಕಿಯ ತಾತ ನೀಡಿದ ದೂರಿನ ಆಧಾರದ ಮೇಲೆ ಸುಮಾರು 29 ವರ್ಷದ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ POCSO ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗೋಲಾ ವೃತ್ತಾಧಿಕಾರಿ ದರ್ವೇಶ್ ಕುಮಾರ್ ತಿಳಿಸಿದ್ದಾರೆ.

“ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದ್ದು, ವಿವಿಧೆಡೆ ದಾಳಿ ನಡೆಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಡಿಕೆಶಿ ಬಾಲ್ಯ ಸ್ನೇಹಿತ, ನಟ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ ‘ಕ್ರೇಜಿ ಸ್ಟಾರ್’ ಎಂಟ್ರಿ ಸಾಧ್ಯತೆ

ಮಳೆ ಕೊರತೆ ನೀಗಿಸಲು ರಾಜ್ಯ ಸರ್ಕಾರದ ಮಾಸ್ಟರ್ ಪ್ಲ್ಯಾನ್; Cloud seeding ಗೆ ಎರಡು ಸಮಿತಿಗಳ ರಚನೆ

ಹೈಕೋರ್ಟ್ ಆದೇಶ ಉಲ್ಲಂಘನೆ: ಮಮತಾ ವಿರುದ್ಧ ಸ್ವಯಂಪ್ರೇರಿತವಾಗಿ FIR ದಾಖಲಿಸಿದ ಪೊಲೀಸರು; ಮಾಜಿ CMಗೆ ಬಿಗ್ ಶಾಕ್!

ಮನುಕುಲಕ್ಕೆ ಎಚ್ಚರಿಕೆಗಾಗಿ ಟೈಮ್ ಟ್ರಾವಲ್! 2022 ರಲ್ಲಿ ಬಂದ ChatGPT ಬಳಸದಂತೆ 2012 ರಲ್ಲೇ ಜನರಿಗೆ ಕರೆ ನೀಡಿದ್ದ ಪೋಸ್ಟ್ ವೈರಲ್!

ಬಿಎಸ್ ಯಡಿಯೂರಪ್ಪಗೆ ಬಿಗ್ ಶಾಕ್: BJP ಸಂಸದೀಯ ಮಂಡಳಿಯಿಂದ ಕೊಕ್ ಸಾಧ್ಯತೆ